ಚೈಬಾಸಾ (ಜಾರ್ಖಂಡ್): ಶಾಲೆಯ ತರಗತಿ ಕೊಠಡಿಯೊಳಗೆ ಬಾಲಕಿಯರಿಗೆ ಪೋರ್ನ್ ವೀಡಿಯೊ ತೋರಿಸಿ, ಅಶ್ಲೀಲ ರೀತಿಯಲ್ಲಿ ಅವರ ಮೈಮುಟ್ಟಿದ ಶಿಕ್ಷಕನ ಮುಖಕ್ಕೆ ಮಸಿ ಬಳಿದು, ಆತನಿಗೆ ಚಪ್ಪಲಿ ಹಾರ ಹಾಕಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಘಟನೆ ನಡೆದಿದೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಗ್ರಾಮಸ್ಥರಿಂದ ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಈ ಮಧ್ಯೆ ಆರೋಪಿಯನ್ನು ತಕ್ಷಣ ಜೈಲಿಗಟ್ಟುವಂತೆ ಆಗ್ರಹಿಸಿ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
ಶಾಲಾ ಶಿಕ್ಷಕರು ತಮಗೆ ಅಶ್ಲೀಲ ವಿಡಿಯೋ ತೋರಿಸಿ ನಮ್ಮ ಮೈ ಮುಟ್ಟಿದ್ದಾರೆ ಎಂದು ನೋವಾಮುಂಡಿ ಬ್ಲಾಕ್ನ ಮಿಡ್ಲ್ ಸ್ಕೂಲ್ನಲ್ಲಿ ಕಲಿಯುತ್ತಿರುವ ಕನಿಷ್ಠ ಆರು ಬಾಲಕಿಯರು ಪೋಷಕರಿಗೆ ತಿಳಿಸಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದರು. ವಿಷಯ ತಿಳಿದ ಗ್ರಾಮಸ್ಥರು ಆರೋಪಿಯ ವಿರುದ್ಧ ಬುಧವಾರ ದೂರು ದಾಖಲಿಸಿದ್ದಾರೆ. ದೂರು ನೀಡಿದ ನಂತರವೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ತಾವೇ ಸಭೆ ನಡೆಸಿ ಆರೋಪಿಯ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ.
ಭಾರೀ ಸಂಖ್ಯೆಯಲ್ಲಿದ್ದ ಮಹಿಳೆಯರು ಆರೋಪಿಯನ್ನು ಹಿಡಿದು ಗುರುವಾರ ಮುಖಕ್ಕೆ ಮಸಿ ಬಳಿದು ಚಪ್ಪಲಿ ಹಾರ ಹಾಕಿದ್ದಾರೆ. ಬಡಜಮಡಾ ಪ್ರದೇಶದಲ್ಲಿ ಮೆರವಣಿಗೆ ಮಾಡಿ ಸಮೀಪದ ರೈಲ್ವೆ ನಿಲ್ದಾಣದ ಕಡೆಗೆ ಕರೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ಸ್ಥಳಕ್ಕೆ ಧಾವಿಸಿ ಆತನನ್ನು ರಕ್ಷಿಸಿದ್ದಾರೆ. ಹಲವಾರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಮಹಿಳೆಯರನ್ನು ಸರ್ಕಲ್ ಇನ್ಸ್‌ಪೆಕ್ಟರ್ (ಕಿರಿಬೂರು) ವೀರೇಂದ್ರ ಎಕ್ಕಾ ಸಮಾಧಾನಪಡಿಸಲು ಪ್ರಯತ್ನಿಸಿದರು. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಬಡಜಮಡಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಬಸುದೇವ್ ಟೊಪ್ಪೊ ತಿಳಿಸಿದ್ದಾರೆ.
ಇದನ್ನೂ ಓದಿ: 14ರ ಪೋರನಿಗೆ ಪೋರ್ನ್ ತೋರಿಸಿ ತನ್ನತ್ತ ಸೆಳೆದ 30ರ ನಾರಿ: ಕಿಡ್ನಾಪ್ ಮಾಡಿ, ಹೈದರಾಬಾದ್ನಲ್ಲಿ ಸಹಜೀವನ!