ಹಜಾರಿಬಾಗ್(ಜಾರ್ಖಂಡ್): ಫೈನಾನ್ಸ್ಗಳಲ್ಲಿ ಸಾಲ ಪಡೆದುಕೊಳ್ಳುವುದು ಉತ್ತಮವಲ್ಲ ಎಂಬ ಮಾತುಗಳು ಈ ಹಿಂದಿನಿಂದಲೂ ಕೇಳಿ ಬರ್ತಿವೆ. ಸಾಲ ವಸೂಲಿ ಮಾಡುವ ವೇಳೆ ಇನ್ನಿಲ್ಲದ ರೀತಿಯಲ್ಲಿ ಕಿರುಕುಳ ನೀಡ್ತಾರೆ ಎಂಬ ಮಾತಿದೆ. ಅದಕ್ಕೆ ಪೂರಕ ಎಂಬ ರೀತಿಯಲ್ಲೇ ಜಾರ್ಖಂಡ್ನಲ್ಲೊಂದು ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಸಾಲ ವಸೂಲಾತಿ ವೇಳೆ ಫೈನಾನ್ಸ್ ಅಧಿಕಾರಿಗಳು ಗರ್ಭಿಣಿ ಮೇಲೆ ಟ್ರ್ಯಾಕ್ಟರ್ ಹರಿಸಿ, ಕೊಂದಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಫೈನಾನ್ಸ್ನಲ್ಲಿ ಬಡ ಕುಟುಂಬವೊಂದು ಸಾಲ ಪಡೆದುಕೊಂಡಿತ್ತು. ಅದನ್ನು ಮರುಪಾವತಿಸದ ಕಾರಣ ಅಧಿಕಾರಿಗಳು ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಪ್ರಕರಣ ನಡೆದಿದೆ. ಹಜಾರಿಬಾಗ್ನ ಇಚ್ಚಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಮೂರು ತಿಂಗಳ ಗರ್ಭಿಣಿ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ರತನ್ ಮಾಹಿತಿ ನೀಡಿದ್ದು, ಟ್ರ್ಯಾಕ್ಟರ್ ಮೇಲೆ ಕುಟುಂಬವೊಂದು ಸಾಲ ಪಡೆದುಕೊಂಡಿತ್ತು. ಅದನ್ನ ವಾಪಸ್ ಮಾಡದ ಕಾರಣ ಫೈನಾನ್ಸ್ ಕಂಪನಿ ಅಧಿಕಾರಿಗಳು ರೈತನ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅಧಿಕಾರಿಗಳು ಹಾಗೂ ರೈತನ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಅಧಿಕಾರಿಗಳು ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗಲು ಮುಂದಾಗಿದ್ದು, ರೈತನ ಗರ್ಭಿಣಿ ಮಗಳು ಅದರ ಮುಂದೆ ಬಂದಿದ್ದಾಳೆ. ಈ ವೇಳೆ ಟ್ರ್ಯಾಕ್ಟರ್ ಚಕ್ರದಡಿ ಸಿಲುಕಿದ್ದಾಳೆ. ತಕ್ಷಣವೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಪ್ರೀತಿಸಿ ಮದುವೆ: ಗರ್ಭಿಣಿ ಪತ್ನಿಗೆ ಮದ್ಯ ಕುಡಿಸಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಫೈನಾನ್ಸ್ ಕಂಪನಿಯ ರಿಕವರಿ ಎಜೆಂಟ್, ಮ್ಯಾನೇಜರ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಫೈನಾನ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಅನೀಶ್ ಶಾ ಪ್ರಕರಣದ ಬಗ್ಗೆ ಎಲ್ಲ ವಿಭಾಗಗಳಿಂದಲೂ ತನಿಖೆ ನಡೆಸಲಾಗುವುದು. ಈ ಘಟನೆಯಿಂದ ನಾವು ತೀವ್ರ ಆಘಾತಕ್ಕೊಳಗಾಗಿದ್ದೇವೆ ಎಂದಿದ್ದಾರೆ.