ರಾಮಗಢ(ಜಾರ್ಖಂಡ್): ಜಾರ್ಖಂಡ್ನ ರಾಮಗಢ ಜಿಲ್ಲೆಯಲ್ಲಿ ವಿವಾಹಿತ ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಮಮತಾದೇವಿ ಎಂದು ಗುರುತಿಸಲಾಗಿದೆ. ಜನವರಿ 14 ರಂದು ಮಮತಾದೇವಿ ತನ್ನ ಸಹೋದರಿ ಜಯಾ ಮತ್ತು ಭಾವ ನಿಖಿಲ್ ಕುಶ್ವಾಹಾ ಅವರೊಂದಿಗೆ ದೆಹಲಿಯಿಂದ ರಾಮಗಢಕ್ಕೆ ಬಂದಿದ್ದರು. ಅದೇ ದಿನ ಮಮತಾ ಪ್ರಿಯಕರ ಅರ್ಮಾನ್ ಖಾನ್ ಅಲಿಯಾಸ್ ರಾಕಿ ಕೂಡ ಬಂದಿದ್ದು, ಬಾಡಿಗೆ ಮನೆಯೊಂದರಲ್ಲಿ ತಂಗಿದ್ದ.
ನಿನ್ನೆ ಸಂಜೆ ಜಯಾ ಮತ್ತು ನಿಖಿಲ್ ದಿನಸಿ ಖರೀದಿಸಲೆಂದು ಮಾರುಕಟ್ಟೆಗೆ ತೆರಳಿದ್ದರು. ಮನೆಗೆ ಹಿಂದಿರುಗಿದಾಗ ಮಮತಾ ದೇಹದಲ್ಲಿ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಸಾಧ್ಯವಾಗದ ಕಾರಣ ಆಕೆಯನ್ನು ರಾಮಗಢದ ಸದರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಾಗಲೇ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಲವ್ ಜಿಹಾದ್?: ಹಜಾರಿಬಾಗ್ ನಿವಾಸಿ ಅರ್ಮಾನ್ ಖಾನ್ ಅಲಿಯಾಸ್ ರಾಕಿ ನನ್ನ ತಂಗಿಯನ್ನು ಪ್ರೀತಿಯಲ್ಲಿ ಬೀಳಿಸಿದ್ದ. ಆತನೇ ಕೊಲೆ ಮಾಡಿರುವುದಾಗಿ ಮಮತಾದೇವಿ ಸಹೋದರಿ ಜಯಾ ಹೇಳಿದ್ದಾರೆ. ಅಲ್ಲದೇ, ಇದು ಲವ್ ಜಿಹಾದ್ ಪ್ರಕರಣವೆಂದು ಆರೋಪಿಸಿದ್ದಾರೆ. 'ನನ್ನ ತಂಗಿ ಮಮತಾ ಆಕೆಯ ಪತಿಯೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದಳು. ಆದರೆ ಕಳೆದ 1 ವರ್ಷದಿಂದ ರಾಕಿ ಎಂಬ ಹೆಸರು ಹೇಳಿಕೊಂಡು ಅರ್ಮಾನ್ ನನ್ನ ತಂಗಿಯ ಜೊತೆ ಸಂಬಂಧ ಇಟ್ಟುಕೊಂಡಿದ್ದ. ನಿರಂತರವಾಗಿ ಅವರಿಬ್ಬರು ಫೋನಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಕೂಡ ಶುರುವಾಗಿತ್ತು. ಇದನ್ನೇ ಅಸ್ತ್ರವಾಗಿಟ್ಟುಕೊಂಡ ಅರ್ಮಾನ್ ತನ್ನ ಬಳಿಗೆ ಬರುವಂತೆ ಪದೇ ಪದೇ ಮಮತಾಳಿಗೆ ಹೇಳುತ್ತಿದ್ದ. ಅಲ್ಲದೇ ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದ. ಈಗ ಆತನೇ ನನ್ನ ತಂಗಿಯನ್ನು ಕೊಂದು ಪರಾರಿಯಾಗಿದ್ದಾನೆ' ಎಂದು ಹೇಳಿದ್ದಾರೆ.
ಪೊಲೀಸರ ಪ್ರತಿಕ್ರಿಯೆ: ಮಮತಾ ಅವರ ಕಣ್ಣಿನ ಬಳಿ ಚೂಪಾದ ವಸ್ತುವಿನಿಂದ ಪೆಟ್ಟು ಬಿದ್ದಿದ್ದು, ಇದರಿಂದ ಆಕೆ ಸಾವನ್ನಪ್ಪಿರುವುದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ. ಶವವನ್ನು ಈಗಾಗಲೇ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಕೊಲೆಗೆ ನಿಜ ಕಾರಣ ತಿಳಿಯಲಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮೃತಳ ಮನೆಯವರ ಹೇಳಿಕೆಯಂತೆ ಅರ್ಮಾನ್ ಖಾನ್ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರೈಲ್ವೆಯಲ್ಲಿ ಖಾಸಗಿ ಗುತ್ತಿಗೆದಾರರಿಗೆ ಲಾಭ ಮಾಡಲು ಲಂಚ: ಹಿರಿಯ ಅಧಿಕಾರಿ, ಹವಾಲಾ ಆಪರೇಟರ್ ಸೇರಿ 7 ಜನರ ಸೆರೆ