ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಎಂಜಿನಿಯರಿಂಗ್ ಕೋರ್ಸ್ಗೆ ಪ್ರವೇಶ ಪರೀಕ್ಷೆಯಾದ ಜೆಇಇ-ಮುಖ್ಯ ಪರೀಕ್ಷೆಯ ನಾಲ್ಕನೇ ಆವೃತ್ತಿಯ ಫಲಿತಾಂಶ ಬಿಡುಗಡೆ ಮಾಡಿದ್ದು,ಒಟ್ಟು 44 ಮಂದಿ ಶೇಕಡಾ ನೂರರಷ್ಟು ಫಲಿತಾಂಶ ಪಡೆದಿದ್ದರೆ, ಕರ್ನಾಟಕದ ಗೌರಬ್ ದಾಸ್ ಸೇರಿ ಒಟ್ಟು 18 ಅಭ್ಯರ್ಥಿಗಳು ಅಗ್ರ ಶ್ರೇಯಾಂಕವನ್ನು ಹಂಚಿಕೊಂಡಿದ್ದಾರೆ.
ಮಂಗಳವಾರ ಮಧ್ಯರಾತ್ರಿ ಫಲಿತಾಂಶ ಬಿಡುಗಡೆ ಮಾಡಿರುವ ಎನ್‌ಟಿಎ ಅಭ್ಯರ್ಥಿಗಳು ಬುಧವಾರ ಬೆಳಿಗ್ಗೆ 3 ಗಂಟೆಯ ನಂತರ ವೆಬ್ಸೈಟ್ನಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು ಎಂದು ತಿಳಿಸಿದೆ.
ಕರ್ನಾಟಕದ ಗೌರಬ್ ದಾಸ್, ಬಿಹಾರದ ವೈಭವ ವಿಶಾಲ್,ಆಂಧ್ರಪ್ರದೇಶದ ಕರ್ಣಮ್ ಲೋಕೇಶ್, ದುಗ್ಗಿನೇನಿ ವೆಂಕಟ ಪನೀಶ್, ಪಸಾಲ ವೀರ ಶಿವ ಮತ್ತು ಕಾಂಚನಪಲ್ಲಿ ರಾಹುಲ್ ನಾಯ್ಡು, , ರಾಜಸ್ಥಾನದ ಅನ್ಶುಲ್ ವರ್ಮಾ ಮತ್ತು ಮೃದಲ್ ಅಗರ್ವಾಲ್, ದೆಹಲಿಯ ರುಚಿರ್ ಬನ್ಸಾಲ್ ಮತ್ತು ಕಾವ್ಯ ಚೋಪ್ರಾ, ಉತ್ತರ ಪ್ರದೇಶದ ಅಮೈಯಾ ಸಿಂಘಾಲ್ ಮತ್ತು ಪಾಲ್ ಅಗರ್ವಾಲ್, ತೆಲಂಗಾಣದ ಕೊಮ್ಮ ಶರಣ್ಯ ಮತ್ತು ಜೋಷ್ಯುಲ ವೆಂಕಟ ಆದಿತ್ಯಾ,ಮಹರಾಷ್ಟ್ರದ ಅಥರ್ವ ಅಭಿಜಿತ್ ಟಾಂಬಾಟ್, ಪಂಜಾಬ್ನ ಪುಲಕಿತ್ ಗೋಯಲ್ ಹಾಗೂ ಚಂಡೀಗಡದ ಗುರಮ್ರಿತ್ ಸಿಂಗ್ ಅಗ್ರ ಶ್ರೇಯಾಂಕ ಪಡೆದುಕೊಂಡಿದ್ದಾರೆ.
ಈ ವರ್ಷದಿಂದ ಜೆಇಇ ಮೈನ್ ಪರೀಕ್ಷೆಯನ್ನು ವಿದ್ಯಾರ್ಥಿಗಳಿಗೆ ನಮ್ಯತೆ ಮತ್ತು ಅವರ ಅಂಕಗಳನ್ನು ಸುಧಾರಿಸುವ ಅವಕಾಶವನ್ನು ನೀಡುವುದಕ್ಕಾಗಿ ವರ್ಷಕ್ಕೆ ನಾಲ್ಕು ಬಾರಿ ನಡೆಲಾಗುತ್ತಿದೆ. ಮೊದಲ ಹಂತವನ್ನು ಫೆಬ್ರವರಿಯಲ್ಲಿ ಮತ್ತು ಎರಡನೇ ಹಂತವನ್ನು ಮಾರ್ಚ್‌ನಲ್ಲಿ ನಡೆಸಲಾಗಿತ್ತು. ಉಳಿದ 2 ಹಂತ ಏಪ್ರಿಲ್ ಮತ್ತು ಮೇನಲ್ಲಿ ನಡೆಯಬೇಕಿತ್ತಾದರೂ ಕೊರೊನಾ ಕಾರಣ ಮುಂದೂಡಲಾಗಿತ್ತು. ಹಾಗಾಗಿ 3ನೇ ಹಂತದ ಪರೀಕ್ಷೆ ಜುಲೈನಲ್ಲಿ ಮತ್ತು 4ನೇ ಹಂತದ ಪರೀಕ್ಷೆ ಆಗಸ್ಟ್ 26 ರಿಂದ ಸೆಪ್ಟೆಂಬರ್ 2ರವರೆಗೆ ನಡೆದಿತ್ತು.
ಈಗಾಗಲೇ ಜಾರಿಗೆ ತಂದಿರುವ ನೀತಿಗೆ ಅನುಗುಣವಾಗಿ ನಾಲ್ಕು NTA ಪರೀಕ್ಷೆಗಳಲ್ಲಿ ಪಡೆದ ಸ್ಕೋರ್‌ಗಳಲ್ಲಿ ಅತ್ಯುತ್ತಮವಾದದ್ದನ್ನು ಪರಿಗಣಿಸಿ ಅಭ್ಯರ್ಥಿಗಳ ರ್ಯಾಂಕ್ ಬಿಡುಗಡೆ ಮಾಡಲಾಗಿದೆ.
ಪರೀಕ್ಷೆಯನ್ನು ಇಂಗ್ಲಿಷ್, ಹಿಂದಿ, ಗುಜರಾತಿ, ಅಸ್ಸಾಮಿ, ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಬರೆಯುವುದಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅವಕಾಶ ಮಾಡಿಕೊಟ್ಟಿತ್ತು.
ಇದನ್ನು ಓದಿ: