ನವದೆಹಲಿ : ಜನತಾದಳ (ಯುನೈಟೆಡ್) ರಾಜ್ಯಸಭಾ ಸಂಸದ, 'ಕಿಂಗ್ ಮಹೇಂದ್ರ' ಎಂದೇ ಖ್ಯಾತರಾಗಿದ್ದ ಮಹೇಂದ್ರ ಪ್ರಸಾದ್(81) ನಿನ್ನೆ (ಭಾನುವಾರ) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಕೆಲ ಸಮಯದಿಂದ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ದೇಶದ ಫಾರ್ಮಾ ಉದ್ಯಮಿಗಳಲ್ಲಿ ಒಬ್ಬರಾದ ಮಹೇಂದ್ರ ಪ್ರಸಾದ್ ಬಿಹಾರದಿಂದ ಏಳು ಬಾರಿ ರಾಜ್ಯಸಭಾ ಸಂಸದರಾಗಿದ್ದರು ಮತ್ತು ಒಮ್ಮೆ ಲೋಕಸಭೆಗೆ ಚುನಾಯಿತರಾಗಿದ್ದರು. 1980ರಲ್ಲಿ ಬಿಹಾರದ ಜೆಹಾನಾಬಾದ್ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಕಿಂಗ್ ಮಹೇಂದ್ರ ಸ್ಪರ್ಧಿಸಿ ಗೆದ್ದರು.
ಬಳಿಕ 1984ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತರು. ಆದಾಗ್ಯೂ 1985ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡರು. 1985ರಿಂದ ಮಹೇಂದ್ರ ಪ್ರಸಾದ್ ಈವರೆಗೆ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಸಂಸತ್ತಿನಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಂಸದರಲ್ಲಿ ಅವರೂ ಒಬ್ಬರು. ಕಾಂಗ್ರೆಸ್ ಮತ್ತು ಜೆಡಿಯು ಹೊರತುಪಡಿಸಿ, ಪ್ರಸಾದ್ ಅವರನ್ನು ಜನತಾದಳ ಮತ್ತು ರಾಷ್ಟ್ರೀಯ ಜನತಾದಳದಿಂದ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು.
ಪ್ರಸಾದ್ ಅವರ ನಿಧನಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅರಿಸ್ಟೋ ಫಾರ್ಮಾಸ್ಯುಟಿಕಲ್ಸ್‌ನ ಸಂಸ್ಥಾಪಕ ಮಹೇಂದ್ರ ಪ್ರಸಾದ್ ಅವರ ನಿಧನವು ಉದ್ಯಮದ ಜತೆಗೆ ಸಮಾಜ ಮತ್ತು ರಾಜಕೀಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಛತ್ತೀಸ್‌ಗಢ ಎನ್‌ಕೌಂಟರ್: ನಾಲ್ವರು ಮಹಿಳೆಯರು ಸೇರಿ 6 ಮಾವೋವಾದಿಗಳ ಹತ್ಯೆ