ಬಿಜಾಪುರ(ಛತ್ತೀಸ್ಗಢ): ಏಪ್ರಿಲ್ 3ರಂದು ಬಿಜಾಪುರ-ಬಸ್ತಾರ್ ಗಡಿಯಲ್ಲಿ ನಡೆದ ನಕ್ಸಲರ ಭೀಕರ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಇವರು ಸದ್ಯ ರಾಯ್ಪುರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎನ್ಕೌಂಟರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಗಾಯಗೊಂಡಿರುವ ಸೈನಿಕರು 'ಈಟಿವಿ ಭಾರತ'ದೊಂದಿಗೆ ಘಟನೆಯ ಮಾಹಿಯನ್ನು ಹಂಚಿಕೊಂಡಿದ್ದಾರೆ. ಎಸ್ಟಿಎಫ್ ಕಾನ್ಸ್ಟೇಬಲ್ ದೇವ್ ಪ್ರಕಾಶ್ ಮಾತನಾಡಿ, ನಕ್ಸಲರು ನಮ್ಮನ್ನ ನಾಲ್ಕು ಕಡೆಗಳಿಂದಲೂ ಸುತ್ತುವರೆದಿದ್ದರು. ಎಲ್ಲ ಕಡೆಯಿಂದ ಗುಂಡಿನ ದಾಳಿ ನಡೆಯುತ್ತಿದ್ದ ಕಾರಣ ನಾವು ಸಹ ಗುಂಡಿನ ದಾಳಿ ನಡೆಸಲು ಶುರು ಮಾಡಿದ್ವಿ. ಆಪರೇಷನ್ ಮಾಡುವ ಸಮಯದಲ್ಲಿ ಸುಮಾರು 300ರಿಂದ 400 ನಕ್ಸಲರು ಸ್ಥಳದಲ್ಲಿದ್ದರು. ಅನೇಕ ನಕ್ಸಲರು ನಮ್ಮ ಗುಂಡಿನ ದಾಳಿಗೆ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿಸಿದರು. ದಾಳಿಯಲ್ಲಿ ಗಾಯಗೊಂಡಿದ್ದ ಯೋಧರನ್ನು ಬೇರೆ ಕಡೆ ಸಾಗಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ. ಆದರೂ ಅವರನ್ನು ಉಳಿಸುವ ಪ್ರಯತ್ನ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಯೋಧರು ದಾಳಿಗೊಳಗಾದಾಗ, ಅಮಿತ್ ಶಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ರು: ಸುರ್ಜೇವಾಲಾ
ಇದೇ ವೇಳೆ ಮಾತನಾಡಿದ ಕೋಬ್ರಾ ಬೆಟಾಲಿಯನ್ನ ಕಾನ್ಸ್ಟೇಬಲ್ ಬಲರಾಜ್ ಸಿಂಗ್, ನಕ್ಸಲರು ನಮ್ಮ ಮೇಲೆ ಬಾಂಬ್ ದಾಳಿ ನಡೆಸಿದ್ದು, ಅದಕ್ಕಿಂತಲೂ ಹೆಚ್ಚಾಗಿ ಗುಂಡಿನ ಸುರಿಮಳೆಗೈದರು. ಇದರಿಂದಾಗಿ ನಮ್ಮ ಸೈನಿಕರು ಹೆಚ್ಚಾಗಿ ಗಾಯಗೊಂಡರು. ಘಟನಾ ಸ್ಥಳದಲ್ಲಿ ಸುಮಾರು 300-400 ನಕ್ಸಲರು ಇದ್ದು, ಮುಂದಿನ ದಿನಗಳಲ್ಲಿ ಅವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಕೆಚ್ಚೆದೆಯ ಮಾತುಗಳನ್ನಾಡಿದ್ದಾರೆ.