ನವದೆಹಲಿ: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಜನರ ಬಗ್ಗೆ ಕೇಂದ್ರ ಸರ್ಕಾರ ಸೂಕ್ಷ್ಮತೆ ತೋರಿಸುತ್ತಿಲ್ಲವೆಂದು ಕಾಂಗ್ರೆಸ್ ಮುಖಂಡ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಇದೀಗ ಆಡಳಿತ ನಡೆಸುತ್ತಿರುವುದು ನರೇಂದ್ರ ಮೋದಿ ಹೊರತು ಜವಾಹರಲಾಲ್ ನೆಹರು ಅಲ್ಲ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಉಂಟಾಗಿರುವ ಲಸಿಕೆಗಳ ಕೊರತೆ ಮತ್ತು ಜೀವ ಉಳಿಸುವ ಕೋವಿಡ್ ವಿರೋಧಿ ಡ್ರಗ್ಸ್ ಔಷಧಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ, ವೈದ್ಯಕೀಯ ಉತ್ಪನ್ನಗಳ ರಫ್ತು ಕುರಿತು ಸರ್ಕಾರ ನೀತಿಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಮಹಾರಾಷ್ಟ್ರ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ.. 22 ಜನರ ದುರ್ಮರಣ!
ಐದು ದಿನಗಳ ಹಿಂದೆಯೇ ರಫ್ತು ನಿಲ್ಲಿಸಲಾಗಿದೆ, ಏಕೆ? ಯಾರ ಮೇಲೆ ಆರೋಪ ಮಾಡಬಹುದು? ಜವಾಹರಲಾಲ್ ನೆಹರು ಆಡಳಿತ ದೇಶದಲ್ಲಿಲ್ಲ. ಇರುವುದು ನರೇಂದ್ರ ಮೋದಿ. ಈ ವಿಚಾರವಾಗಿ ದಿಟ್ಟ ಹೆಜ್ಜೆ ಇಡಬೇಕು ಎಂದು ಅವರು ತಿಳಿಸಿದ್ದಾರೆ. ಭಾರತದಲ್ಲಿ ಆಕ್ಸಿಜನ್ ಉತ್ಪಾದನೆ ವಿಶ್ವದಲ್ಲಿಯೇ ಬೃಹತ್ ಪ್ರಮಾಣದ್ದರೂ, ಕೊರತೆ ಉಂಟಾಗಲು ಕಾರಣವೇನು? ಜನವರಿಯಿಂದ ಮಾರ್ಚ್ ಮಧ್ಯೆ ಕೇಂದ್ರ ಸರ್ಕಾರ 6 ಕೋಟಿ ಲಸಿಕೆ ವಿದೇಶಕ್ಕೆ ರಫ್ತು ಮಾಡಿದೆ. ಈ ಸಮಯದಲ್ಲಿ 3ರಿಂದ 4 ಕೋಟಿ ಭಾರತೀಯರಿಗೆ ಲಸಿಕೆ ಹಾಕಲಾಗಿದೆ. ಭಾರತೀಯರಿಗೆ ಏಕೆ ಪ್ರಾಧಾನ್ಯತೆ ಕೊಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಕೋವಿಡ್ ಸೋಂಕು ಉಲ್ಭಣವಾಗುತ್ತಿರುವ ಸಂದರ್ಭದಲ್ಲಿ ಕೇಂದ್ರ ಸಚಿವರು ಚುನಾವಣಾ ಪ್ರಚಾರ ನಡೆಸುವುದರಲ್ಲಿ ಬ್ಯುಸಿಯಾಗಿದ್ದು, ವೇದಿಕೆ ಮೇಲೆ ನಿಂತುಕೊಂಡು ವಿರೋಧ ಪಕ್ಷಗಳನ್ನ ಟೀಕೆ ಮಾಡ್ತಿದ್ದಾರೆ. ಇವರಿಗೆ ದೇಶದಲ್ಲಿ ಉಂಟಾಗಿರುವ ಆರೋಗ್ಯ ಸಮಸ್ಯೆ ಬಗ್ಗೆ ಗಾಂಭೀರ್ಯತೆ ಇಲ್ಲ ಎಂದಿದ್ದಾರೆ.