ಚೆನ್ನೈ(ತಮಿಳುನಾಡು): ಒಡಿಶಾದಲ್ಲಿ ನಡೆದ ತ್ರಿವಳಿ ರೈಲು ಅಪಘಾತದಲ್ಲಿ 275 ಮಂದಿ ಸಾವನ್ನಪ್ಪಿದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು ಗೊತ್ತೇ ಇದೆ. ಇದಾದ ನಂತರ ಆಗಾಗ ಸಣ್ಣಪುಟ್ಟ ರೈಲು ಅಪಘಾತಗಳು ಸಂಭವಿಸುತ್ತಿವೆ. ಅದೇ ರೀತಿಯಲ್ಲಿ ನಿನ್ನೆ(ಗುರುವಾರ) ರಾತ್ರಿ ಚೆನ್ನೈನಲ್ಲಿ 'ಜನ ಶತಾಬ್ದಿ ಎಕ್ಸ್‌ಪ್ರೆಸ್' ರೈಲು ಅಪಘಾತಕ್ಕೀಡಾಗಿದೆ. ಚೆನ್ನೈ ಬೇಸಿನ್ ಬ್ರಿಡ್ಜ್ ವರ್ಕ್‌ಶಾಪ್ ಬಳಿ ಜನ ಶತಾಬ್ದಿ ಎಕ್ಸ್‌ಪ್ರೆಸ್‌ನ 2 ಬೋಗಿಗಳು ಹಳಿ ತಪ್ಪಿದ್ದು, ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.
ವಿಜಯವಾಡದಿಂದ ಜನ ಶತಾಬ್ದಿ ಎಕ್ಸ್‌ಪ್ರೆಸ್ ಚೆನ್ನೈ ಪುರಟ್ಚಿ ತಲೈವರ್ ಡಾ. ಎಂಜಿಆರ್ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬಂದಿತ್ತು. ನಿನ್ನೆ ಮಧ್ಯರಾತ್ರಿ 12 ಗಂಟೆಗೆ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದ ಬೇಸಿನ್ ಬ್ರಿಡ್ಜ್ ವರ್ಕ್ ಶಾಪ್ಗೆ ತೆರಳಿತ್ತು. ನಂತರ ವರ್ಕ್ ಶಾಪ್ ಬಳಿ ಬರುವಾಗ ಅನಿರೀಕ್ಷಿತವಾಗಿ ರೈಲಿನ 2 ಬೋಗಿಗಳು ಹಳಿ ತಪ್ಪಿದೆ ಎಂದು ತಿಳಿದು ಬಂದಿದೆ. ಸುಮಾರು 2 ಗಂಟೆಗಳ ಬಳಿಕ ರೈಲ್ವೆ ಸಿಬ್ಬಂದಿ ನೆರವಿನಿಂದ ಎರಡೂ ಬೋಗಿಗಳನ್ನು ಟ್ರಾಕ್ಗೆ ತರಲಾಯಿತು. ಘಟನೆಯ ಕುರಿತು ರೈಲ್ವೆ ರಕ್ಷಣಾ ಪಡೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಅವಘಡದಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಇದಕ್ಕೂ ಮೊದಲು ತಮಿಳುನಾಡಿನ ನೀಲಗಿರಿ ಮೌಂಟೇನ್ ರೈಲು ಕೂನೂರ್ ರೈಲು ನಿಲ್ದಾಣದಿಂದ ಹೊರಟ ಕೆಲವೇ ಮೀಟರ್‌ಗಳ ನಂತರ ಹಳಿ ತಪ್ಪಿದ್ದು, ಪ್ರಯಾಣಿಕರಲ್ಲಿ ನಡುಕ ಹುಟ್ಟಿಸಿತ್ತು. "ರೈಲು ಕೂನೂರಿನಿಂದ ಹೊರಟು ಮೆಟ್ಟುಪಾಳ್ಯಂ ಕಡೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿತ್ತು. ರೈಲಿನ ನಾಲ್ಕನೇ ಬೋಗಿ ಹಳಿಯಿಂದ ಹೊರ ಬಂದಿತ್ತು.
ಇಂಜಿನಿಯರ್‌ಗಳು ತಕ್ಷಣವೇ ರೈಲನ್ನು ನಿಲ್ಲಿಸಿದರು. 150ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ವ್ಯವಸ್ಥೆ ಮಾಡಲಾಗಿತ್ತು. ಘಟನೆಯಲ್ಲಿ ಯಾವುದೇ ಸಾವು ನೋವು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಹಳಿ ತಪ್ಪಲು ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಮಾರ್ಗದ ಉದ್ದಕ್ಕೂ ಸೇವೆಗಳು ಇಂದು ಬೆಳಗ್ಗೆಯಿಂದ ಪುನಾರಂಭಗೊಂಡಿದೆ.
ಭೀಕರ ದುರಂತ: ಜೂನ್ 2 ರಂದು (ಶುಕ್ರವಾರ) ಸಂಜೆ 7 ಗಂಟೆ ಸುಮಾರಿನಲ್ಲಿ ಒಡಿಶಾದ ಬನಹಗಾ ರೈಲು ನಿಲ್ದಾಣದ ಬಳಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್ ರೈಲು ಚಲಿಸುತ್ತಿದ್ದಾಗಲೇ ಹಳಿ ತಪ್ಪಿತ್ತು. ಇದರಿಂದ ಇನ್ನೊಂದು ಲೈನ್ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಇದರ ರಭಸಕ್ಕೆ ಗೂಡ್ಸ್ ಮತ್ತು ಕೋರಮಂಡಲ್ ರೈಲಿನ ಬೋಗಿಗಳು ಮತ್ತೊಂದು ಹಳಿಯ ಮೇಲೆ ಬಿದ್ದಿದ್ದವು.
ಅದೇ ಸಮಯಕ್ಕೆ ವಿರುದ್ಧ ದಿಕ್ಕಿನಿಂದ ಎಸ್‌ಎಂವಿಪಿ - ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಯಶವಂತಪುರದಿಂದ ಬಂದ ಹೌರಾ ಎಕ್ಸ್‌ಪ್ರೆಸ್ ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ವೇಗವಾಗಿ ಡಿಕ್ಕಿಯಾಗಿದೆ. ಇದರಿಂದ ಭೀಕರತೆ ಉಂಟಾಗಿತ್ತು. ಮೂರು ರೈಲುಗಳ ನಡುವಿನ ತಿಕ್ಕಾಟದಲ್ಲಿ ಈವರೆಗೆ 275 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಒಡಿಶಾದ ಬಾಲಸೋರ್ನಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಅಪಘಾತ: ಹಲವರಿಗೆ ಗಂಭೀರ ಗಾಯ