ಪ್ರತಿ ವರ್ಷ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಭಾರತದ ಯುವಕರನ್ನು ಮಾನಸಿಕ, ಬೌದ್ಧಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಪ್ರೇರೇಪಿಸಿದ ಸ್ವಾಮಿ ವಿವೇಕಾನಂದರಿಗೆ ಸಮರ್ಪಿತವಾಗಿದೆ. ಕಾರಣ ಜಗತ್ತಿಗೆ ಮೊದಲ ಬಾರಿಗೆ ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯನ್ನು ಪರಿಚಯಿಸಿದ ವೀರ ಸನ್ಯಾಸಿಯ ಹುಟ್ಟಿದ ದಿನ ಕೂಡ ಜನವರಿ 12.
ಇದೇ ದಿನವನ್ನು(ಜ.12) ವಿಶ್ವಸಂಸ್ಥೆ 1984 ರಲ್ಲಿ ಅಂತಾರಾಷ್ಟ್ರೀಯ ಯುವ ದಿನವನ್ನಾಗಿ ಘೋಷಣೆ ಮಾಡಿತ್ತು. ಇದರಿಂದ ಪ್ರೇರಿತವಾದ ಭಾರತ ಸರ್ಕಾರ 1984ರಲ್ಲಿ ಯುವ ದಿನವನ್ನು ಆಚರಿಸಲು ನಿರ್ಧರಿಸಿತು. ಆ ದಿನವನ್ನು ಯಾವ ಮಹಾನ್ ಸಾಧಕನ ಹೆಸರಲ್ಲಿ ಆಚರಿಸಬೇಕು ಎಂದು ಚಿಂತನೆಯಲ್ಲಿ ಹೊಳೆದದ್ದು, ಇಡೀ ಜಗತ್ತಿಗೆ ಭಾರತದ ಸಂಸ್ಕೃತಿ ಪರಿಚಯಿಸಿದ, ಯುವಕರ ಆದರ್ಶ ಪುರುಷ, ಸಿಡಿಲ ಸಂತ ವಿವೇಕಾನಂದರ ಜನ್ಮದಿನ.
ವಿವೇಕಾನಂದರು ತಮ್ಮ 35 ನೇ ವಯಸ್ಸಿಗೇ ಅಮೆರಿಕ, ಯುರೋಪ್ ದೇಶಗಳಲ್ಲಿ ಭಾರತೀಯ ತತ್ವಶಾಸ್ತ್ರದ ಛಾಪು ಮೂಡಿಸಿದವರು. ರಾಮಕೃಷ್ಣ ಮಿಷನ್‌ನಂತಹ ಸಮಾಜ ಸೇವಾ ಸಂಸ್ಥೆಗೆ ಅಡಿಪಾಯ ಹಾಕಿ ವೇದಾಂತವನ್ನು ಯುವಜನತೆಗೆ ಉಣಬಡಿಸಿದವರು. ಅಂತಹ ಮಹಾನ್ ಸಾಧಕನ ಜನ್ಮದಿನವನ್ನು ಯುವ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.
ವೀರ ಸನ್ಯಾಸಿಯ ಪರಿಚಯ:
ಸ್ವಾಮಿ ವಿವೇಕಾನಂದರು 1863 ರ ಜನವರಿ 12 ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಜನಿಸಿದರು. ಅವರ ಮೊದಲ ಹೆಸರು ನರೇಂದ್ರ ದತ್ತ. ಅವರ ತಂದೆ ವಿಶ್ವನಾಥ್ ದತ್ತ. ಇವರು ಕೋಲ್ಕತ್ತಾ ಹೈಕೋರ್ಟ್‌ನ ಪ್ರಸಿದ್ಧ ವಕೀಲರಾಗಿದ್ದರು. ಮಗ ಇಂಗ್ಲಿಷ್ ಅಭ್ಯಾಸ ಮಾಡಿ ದೊಡ್ಡ ಹುದ್ದೆ ಅಲಂಕರಿಸಬೇಕು ಎಂಬುದು ಹೆತ್ತಪ್ಪನ ಮಹಾದಾಸೆಯಾಗಿತ್ತು.
ನರೇಂದ್ರ ದತ್ತರು ಓದಿನಲ್ಲಿ ನಿಪುಣರಾಗಿದ್ದರು. 25 ನೇ ವಯಸ್ಸಿನಲ್ಲಿ ಅವರು ಪ್ರಪಂಚದ ಎಲ್ಲಾ ಸಿದ್ಧಾಂತ, ತತ್ವಗಳು ಮತ್ತು ಧಾರ್ಮಿಕ ಪುಸ್ತಕಗಳನ್ನು ಅಭ್ಯಾಸ ಮಾಡಿದರು. ಸಂಗೀತ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ವೇದಪುರಾಣದಿಂದ ಹಿಡಿದು ಕುರಾನ್- ಬೈಬಲ್ ಸೇರಿದಂತೆ ಎಲ್ಲಾ ಧರ್ಮ ಗ್ರಂಥಗಳನ್ನು ಅಭ್ಯಸಿಸಿದರು.
ರಾಮಕೃಷ್ಣ ಪರಮಹಂಸರ ಭೇಟಿ
1881 ರಲ್ಲಿ ನರೇಂದ್ರ ದತ್ತ (ಸ್ವಾಮಿ ವಿವೇಕಾನಂದ) ರಾಮಕೃಷ್ಣ ಪರಮಹಂಸರನ್ನು ಭೇಟಿಯಾದರು. ಆಧ್ಯಾತ್ಮಿಕ ಮತ್ತು ನಂಬಿಕೆಯ ಬಗ್ಗೆ ಅವರಲ್ಲಿ ಚರ್ಚಿಸಿದರು. ಬಳಿಕ ರಾಮಕೃಷ್ಣ ಪರಮಹಂಸರು ನರೇಂದ್ರ ದತ್ತನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ಬಾಲಕ ನರೇಂದ್ರೆ ಆಧ್ಯಾತ್ಮಿಕ ಕುತೂಹಲ, ಪ್ರಶ್ನೆಗಳಿಗೆ ಪರಮಹಂಸರು ಉತ್ತರವಾಗುತ್ತಿದ್ದರು.
ಒಂದು ದಿನ ರಾಮಕೃಷ್ಣರು ವಾದವನ್ನು ಬಿಟ್ಟು ಆತ್ಮಸಾಕ್ಷಿಯನ್ನು ಜಾಗೃತಗೊಳಿಸುವಂತೆ ವಿವೇಕಾನಂದರಿಗೆ ಸಲಹೆ ನೀಡಿದರು. ಸೇವೆಯ ಮೂಲಕ ಆಧ್ಯಾತ್ಮಿಕ ಮಾರ್ಗದ ಬಗ್ಗೆ ತಿಳಿಸಿದರು. ಆಗ ನರೇಂದ್ರ ದತ್ತರು ಲೌಕಿಕ ಬಾಂಧವ್ಯವನ್ನು ತೊರೆದು ಸನ್ಯಾಸಿಯಾದರು ಎಂದು ಹೇಳಲಾಗುತ್ತದೆ.
ಬಳಿಕ ನರೇಂದ್ರ ದತ್ತರು ಆಧ್ಯಾತ್ಮಿಕತೆ ಮತ್ತು ತತ್ವ ಪ್ರಚಾರಕ್ಕಾಗಿ ಕಾಲ್ನಡಿಗೆಯಲ್ಲೇ ಇಡೀ ದೇಶವನ್ನು ಸುತ್ತಿದರು. ಅಧ್ಯಾತ್ಮ ಪ್ರಚಾರದಲ್ಲಿ ನರೇಂದ್ರ ದತ್ತರು ಸ್ವಾಮಿ ವಿವೇಕಾನಂದರಾದರು.
ಚಿಕಾಗೋ ಧರ್ಮಸಂಸತ್ತಿನಲ್ಲಿ ವಿವೇಕಾನಂದರ ಭಾಷಣ
ಸ್ವಾಮಿ ವಿವೇಕಾನಂದರು ತಮ್ಮ 30 ನೇ ವಯಸ್ಸಿನಲ್ಲಿ ಅಂದರೆ 11 ಸೆಪ್ಟೆಂಬರ್ 1893 ರಲ್ಲಿ ಅಮೆರಿಕಾದ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮವನ್ನು ಪ್ರತಿನಿಧಿಸಿದರು. ಈ ಸಂಸತ್ತಿನಲ್ಲಿ ವಿವೇಕಾನಂದರು ಮಾಡಿದ ಭಾಷಣ ಇತಿಹಾಸವೇ ಸರಿ.
ಅವರು ಭಾಷಣದ ಆರಂಭದಲ್ಲಿ ನುಡಿದ ಒಂದು ಮಾತಾದ 'ಅಮೆರಿಕನ್ ಸಹೋದರ, ಸಹೋದರಿಯರೇ' ಎಂಬುದು ಭಾರತದ ಸಂಸ್ಕೃತಿಯ ಪ್ರತೀಕವಾಗಿತ್ತು. ಬಳಿಕ ವಿವೇಕಾನಂದರು ಮಾಡಿದ ಭಾಷಣಕ್ಕೆ ನೆರೆದಿದ್ದ ಎಲ್ಲರೂ ತಲೆದೂಗಿ, ಚಪ್ಪಾಳೆ ತಟ್ಟಿದರು.
ಇದಾದ ನಂತರ ಸ್ವಾಮಿ ವಿವೇಕಾನಂದರು ತಮ್ಮ ವಿಚಾರವನ್ನು ಅರುಹಲು ಅಮೆರಿಕಕ್ಕೆ ವಲಸೆ ಬಂದರು. ವೇದಾಂತ, ಆಧ್ಯಾತ್ಮಿಕತೆಯ ಗುರುವಾಗಿದ್ದ ಸ್ವಾಮಿ ವಿವೇಕಾನಂದರು 4 ಜುಲೈ 1902 ರಂದು 39 ನೇ ವಯಸ್ಸಿನಲ್ಲಿ ನಿಧನರಾದರು.
ಸ್ವಾಮಿ ವಿವೇಕಾನಂದರು ದಿನಕ್ಕೆ 2 ಗಂಟೆಗಳು ಮಾತ್ರ ನಿದ್ರಿಸುತ್ತಿದ್ದರಂತೆ. ಪ್ರತಿ 4 ಗಂಟೆಗಳ ನಂತರ 15 ನಿಮಿಷಗಳ ಕಾಲ ನಿದ್ರೆ ಮಾಡುತ್ತಿದ್ದರು. 1897 ರಲ್ಲಿ ಕೋಲ್ಕತ್ತಾದಲ್ಲಿ ಸ್ಥಾಪಿತವಾದ ರಾಮಕೃಷ್ಣ ಮಿಷನ್ ಇಂದಿಗೂ ಸಮಾಜ ಸೇವೆಗೆ ಮುಡಿಪಾಗಿದೆ.