ರಾಂಬನ್ (ಜಮ್ಮು ಮತ್ತು ಕಾಶ್ಮೀರ): ಇಲ್ಲಿನ ರಾಂಬನ್ ಪ್ರದೇಶದಲ್ಲಿ ಮತ್ತೊಮ್ಮೆ ಭಾರೀ ಗುಡ್ಡಕುಸಿತ ಉಂಟಾಗಿದೆ. ಇದರಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಗುಡ್ಡದ ಮಣ್ಣು ಸರಿದು ರಸ್ತೆ ಮೇಲೆ ಬೀಳುತ್ತಿರುವ ವಿಡಿಯೋ ಮೊಬೈಲ್ನಲ್ಲಿ ಜನರು ಸೆರೆ ಹಿಡಿದಿದ್ದಾರೆ.
ಇಂದು ಬೆಳಗ್ಗೆ 6.30 ರ ಸುಮಾರಿನಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡ ಕುಸಿದು ಬಿದ್ದಿದೆ. ಇದರಿಂದ ಮಣ್ಣು, ಕಲ್ಲು ರಸ್ತೆಯ ಮೇಲೆ ತುಂಬಿಕೊಂಡಿದೆ. ಹೀಗಾಗಿ ರಸ್ತೆ ಸಂಚಾರ ಬಂದ್ ಆಗಿದೆ. ಅವಶೇಷವನ್ನು ತೆರವು ಮಾಡುವವರೆಗೆ ಈ ಮಾರ್ಗವಾಗಿ ಯಾರು ಸಂಚಾರ ಮಾಡಬೇಡಿ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಅಂದರೆ ಜುಲೈ 19 ರಂದು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ಭಾರೀ ಮಳೆಯಿಂದಾಗಿ ಗುಡ್ಡದ ಕಲ್ಲುಗಳು ಮತ್ತು ಮಣ್ಣು ಸರಿದು ರಸ್ತೆ ತುಂಬಾ ತುಂಬಿಕೊಂಡಿತ್ತು. ತೆರವು ಕಾರ್ಯಾಚರಣೆಯ ಬಳಿಕ ರಸ್ತೆ ಸಂಚಾರ ಆರಂಭವಾಗಿತ್ತು. ಇದೀಗ ಮತ್ತೆ ಗುಡ್ಡ ಕುಸಿದಿದೆ. ಯಾವುದೇ ಹಾನಿ ಸಂಭವಿಸಿಲ್ಲ. ಜನರು ಈ ಮಾರ್ಗವಾಗಿ ಸಂಚಾರವನ್ನು ತಪ್ಪಿಸಬೇಕು. ತೆರವು ಕಾರ್ಯಾಚರಣೆ ಮುಗಿದ ಬಳಿಕ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆ ಕುಸಿದು ಐವರು ಸಾವು: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಕೆಲ ದಿನಗಳ ಹಿಂದೆ ಮಳೆಯಿಂದಾಗಿ ಎರಡು ಮನೆಗಳು ಕುಸಿದು ಐವರು ಸಾವನ್ನಪ್ಪಿದ್ದರೆ, ರಾಂಬನ್ ಜಿಲ್ಲೆಯ ಬನ್ಹಾಲ್, ಕೆಫೆಟೇರಿಯಾ ಮೋರ್ ಮತ್ತು ಮಾರೋಗ್‌ನ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದರಿಂದ ಸಂಚಾರ ನಿರ್ಬಂಧಿಸಲಾಗಿತ್ತು.
ಕಥುವಾದ ಸುರ್ಜನ್ ಮೋರ್ಹಾ ಅರುದ್ ಬ್ಲಾಕ್‌ನ ನಿವಾಸಿಗಳಾದ ಮುಷ್ತಾಕ್ ಅಹ್ಮದ್ ಮತ್ತು ಅಬ್ದುಲ್ ಕಯೂಮ್ ಎಂಬುವರಿಗೆ ಸೇರಿದ ಮನೆ ಇವಾಗಿದ್ದು, ಸತತ ಮಳೆಯಿಂದಾಗಿ ಕುಸಿದಿದ್ದವು. ಈ ವೇಳೆ ಮಕ್ಕಳು ಸೇರಿ ಐವರು ಅವಶೇಷಗಳಡಿ ಸಿಲುಕಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ರಕ್ಷಣಾ ಪಡೆಗಳು ರಕ್ಷಣಾ ಕಾರ್ಯಾಚರಣೆ ನಡೆಸಿದಾಗ್ಯೂ ಐವರು ಪ್ರಾಣ ಕಳೆದುಕೊಂಡಿದ್ದರು. ಮೃತರ ಕುಟುಂಬದವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿತ್ತು.
ಇತ್ತ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಂಬನ್ ಜಿಲ್ಲೆಯ ಬನ್ಹಾಲ್, ಕೆಫೆಟೇರಿಯಾ ಮೋರ್ ಮತ್ತು ಮಾರೋಗ್ ಪ್ರದೇಶಗಳಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ರಸ್ತೆ ಮೇಲೆ ಮಣ್ಣು ಮತ್ತು ಕಲ್ಲುಗಳು ಬೀಳುತ್ತಿರುವ ಕಾರಣ ಹೆದ್ದಾರಿಯನ್ನು ಮುಚ್ಚಲಾಗಿತ್ತು. ಇದೇ ಮಾರ್ಗವಾಗಿ ಅಮರನಾಥಕ್ಕೆ ಹೊರಡಬೇಕಿದ್ದ ಯಾತ್ರಿಕರನ್ನು ಭಗವತಿ ನಗರ ಮೂಲ ಶಿಬಿರದಿಂದ ಮತ್ತೊಂದು ಮಾರ್ಗವಾಗಿ ಬೆಂಗಾವಲು ಸಮೇತ ಕಾಶ್ಮೀರಕ್ಕೆ ಕಳುಹಿಸಲಾಗಿತ್ತು.
ಇದನ್ನೂ ಓದಿ: eavy rain: ಭೀಕರ ಮಳೆಯಿಂದ ಎರಡು ಮನೆಗಳು ಕುಸಿದು ಐವರು ದುರ್ಮರಣ; ಗುಡ್ಡ ಕುಸಿದು ಹೆದ್ದಾರಿ ಬಂದ್