ಉರಿ (ಜಮ್ಮು-ಕಾಶ್ಮೀರ): ಉರಿ ವಲಯದ ನಿಯಂತ್ರಣ ರೇಖೆಯಲ್ಲಿ ಸೇನೆಯು ಆರಂಭಿಸಿರುವ ಕಾರ್ಯಾಚರಣೆ ಇಂದೂ ಸಹ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಈ ಕಾರ್ಯಾಚರಣೆ ಸಂದರ್ಭದಲ್ಲಿ ಓರ್ವ ಯೋಧ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಕ್ಷಣಾ ವಲಯದ ವಕ್ತಾರ ಈ ಬಗ್ಗೆ ಮಾಹಿತಿ ನೀಡಿದ್ದು, "ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಇನ್ನು ಈ ಸಂದರ್ಭದಲ್ಲಿ ಓರ್ವ ಯೋಧನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ" ಎಂದು ಹೇಳಿದರು.
ಉಗ್ರರ ಒಳನುಸುಳುವಿಕೆ ಪ್ರಯತ್ನ ತಡೆಯಲು ಈ ಪ್ರದೇಶದ ಮೇಲೆ ಭಾರತೀಯ ಸೇನೆ ತೀವ್ರ ನಿಗಾ ಇಟ್ಟಿದೆ. ಈ ಮಧ್ಯೆ ಬಾರಾಮುಲ್ಲಾ ಜಿಲ್ಲೆಯ ಉರಿ ತಹಸಿಲ್‌ನಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಉರಿ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಒಳನುಸುಳಲು ಯತ್ನಿಸಿದ ಭಾರೀ ಶಸ್ತ್ರಸಜ್ಜಿತ ಉಗ್ರರ ಗುಂಪನ್ನು ಸೇನೆಯು ತಡೆದಿದೆ ಎಂದು ಹೇಳಲಾದ ಸುಮಾರು ಎರಡು ದಿನಗಳ ನಂತರ ಸೋಮವಾರ ಮಧ್ಯಾಹ್ನ ಮೊಬೈಲ್ ಸೇವೆಗಳನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಸೆಪ್ಟೆಂಬರ್ 18-19 ರ ಮಧ್ಯರಾತ್ರಿ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
2016 ರ ಸೆಪ್ಟೆಂಬರ್‌ನಲ್ಲಿ ಭಯೋತ್ಪಾದಕರಿಂದ ಉರಿ ಬ್ರಿಗೇಡ್ ಮೇಲೆ ದಾಳಿ ನಡೆದಿತ್ತು.