ನವದೆಹಲಿ: ಜರ್ಮನಿ ವಿದೇಶಾಂಗ ಸಚಿವೆ ಅನ್ನಲೆನಾ ಬೇರ್ಬಾಕ್ ಅವರು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧಗಳ ವೃದ್ಧಿ ಹಾಗೂ ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.
ಈ ಮಾತುಕತೆ ವೇಳೆ, ಉಕ್ರೇನ್‌ನಲ್ಲಿನ ಸಂಘರ್ಷ, ಇಂಡೋ-ಪೆಸಿಫಿಕ್ ಮತ್ತು ಅಫ್ಘಾನಿಸ್ತಾನ, ಪಾಕಿಸ್ತಾನ, ಇರಾನ್ ಮತ್ತು ಸಿರಿಯಾದಲ್ಲಿನ ಬೆಳವಣಿಗೆಗಳು ಸೇರಿದಂತೆ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.
ದ್ವಿಪಕ್ಷೀಯ ಸಭೆಯ ನಂತರ ಉಭಯ ನಾಯಕರು ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಜರ್ಮನಿ ವಿದೇಶಾಂಗ ಸಚಿವರೊಂದಿಗೆ ಚರ್ಚಿಸಲಾಯಿತು, ಪಾಕ್ನೊಂದಿಗಿನ ಸಂಬಂಧಗಳು, ಸ್ವರೂಪ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ಸವಾಲಿನ ಬಗ್ಗೆ ಮಾತನಾಡಿದ್ದೇನೆ. ಆದರೆ, ಭಯೋತ್ಪಾದನೆ ಇರುವಾಗ ನಾವು ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್ ಸ್ಪಷ್ಟಪಡಿಸಿದರು.
ಭಾರತದ ನೇತೃತ್ವದಲ್ಲಿ ಜಿ 20 ಶೃಂಗಕ್ಕೆ ಜರ್ಮನಿ ಸಂತಸ: ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಶೃಂಗ ನಡೆಯುತ್ತಿರುವುದು ಸಂತಸ ತಂದಿದೆ. ಒಂದು ದೇಶ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಘೋಷ ವಾಕ್ಯದೊಂದಿಗೆ ಸಮಾವೇಶ ನಡೆಯುತ್ತಿದ್ದು, ಹವಾಮಾನ ಬಿಕ್ಕಟ್ಟಿನ ಬಗ್ಗೆ ವಿಶೇಷ ಗಮನ ಹರಿಸುತ್ತಿರುವುದು ಖುಷಿಯಾಗಿದೆ. ಹವಾಮಾನ ಬದಲಾವಣೆ ವಿಷಯಕ್ಕೆ ಬಂದಾಗ ನಮ್ಮ ಸಾಮಾನ್ಯ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ ಎಂದು ಜರ್ಮನ್ ವಿದೇಶಾಂಗ ಸಚಿವೆ ಅನ್ನಲೆನಾ ಬೇರ್ಬಾಕ್ ಹೇಳಿದರು.
ಇದನ್ನೂ ಓದಿ: ಭಾರತ ನೇಪಾಳ ಗಡಿಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ: ಕಲ್ಲು ತೂರಾಟ, ಭಾರತೀಯ ಕಾರ್ಮಿಕನಿಗೆ ಗಾಯ