ಕೋಟಾ (ರಾಜಸ್ಥಾನ) : ರಾಹುಲ್ ಗಾಂಧಿಯನ್ನು ಮೂರ್ಖರ ನಾಯಕ ಎಂದು ಜರಿದ ಪ್ರಧಾನಿ ಮೋದಿ ಅವರಿಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ಪಕ್ಷದ ವಿರುದ್ಧ ಅವರು ಸುಳ್ಳು ಹರಡುತ್ತಿದ್ದಾರೆ. ಮೋದಿ 'ಸುಳ್ಳಿನ ಜಗದ್ಗುರು' ಎಂದು ಕಿಡಿಕಾರಿದೆ.
ರಾಜಸ್ಥಾನದ ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಪ್ರಧಾನಿ ಮೋದಿ ಅವರು ಜೂಟ್ ಕಿ ಜಗದ್ಗುರು. ಅವರ ಪಕ್ಷ ಬಿಜೆಪಿ 'ಭಾರತೀಯ ಜೂಟ್ ಪಾರ್ಟಿ' (ಸುಳ್ಳಿನ ಪಕ್ಷ) ವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅದರ ಪ್ರಮುಖ ಮುಖವಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಸಂಘಟನೆಯು ಅದ್ಭುತವಾಗಿದೆ. ಅದುವೇ ಪಕ್ಷದ ಕೇಂದ್ರಬಿಂದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಮೋದಿ ಸುಳ್ಳಿನ ಪ್ರಚಾರ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯು ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು. ಅದೇ ರೀತಿಯ ಫಲಿತಾಂಶ ರಾಜಸ್ಥಾನದಲ್ಲೂ ಮರುಕಳಿಸಲಿದೆ. ಇದನ್ನು ಸಹಿಸಲಾಗದ ಪ್ರಧಾನಿ ಮೋದಿ, ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳುಗಳನ್ನೇ ಹೇಳುತ್ತಾ ತಿರುಗಾಡುತ್ತಿದ್ದಾರೆ. ಹೀಗಾಗಿ ಅವರನ್ನು ಸುಳ್ಳುಗಳ ಜಗದ್ಗುರು ಎಂದು ಕರೆಯಬಹುದಾಗಿದೆ ಎಂದರು.
ಪ್ರಧಾನಿ ಅವರಿಗೆ ಸುಳ್ಳು ಹೇಳುವ ವಿಶಿಷ್ಟ ತಂತ್ರವಿದೆ. ಬಿಜೆಪಿ ಬಳಿ ಕೇವಲ ಮೂರು ಅಸ್ತ್ರಗಳಿವೆ. ಅವುಗಳೆಂದರೆ ಇಡಿ, ಸಿಬಿಐ, ಧ್ರುವೀಕರಣ ಮತ್ತು ಸುಳ್ಳು. ಆದರೆ, ಕಾಂಗ್ರೆಸ್ ಬಳಿ ಅಭಿವೃದ್ಧಿ ಕಾರ್ಯಗಳು, ರೈತರ ಸಾಲ ಮನ್ನಾ, ಕಲ್ಯಾಣ ಯೋಜನೆಗಳಂತಹ ಅಂಶಗಳಿವೆ. ಬಿಜೆಪಿ ಅಸ್ತ್ರಗಳನ್ನು ಎದುರಿಸಲು ಕಾಂಗ್ರೆಸ್ ಶಕ್ತವಾಗಿದೆ ಎಂದು ರಮೇಶ್ ಹೇಳಿದ್ದಾರೆ.
ಒಕ್ಕೂಟ ವ್ಯವಸ್ಥೆ ಬೆಂಬಲಿಸಲಿ: ಪ್ರಧಾನಿ ಯಾವಾಗಲೂ ಗುಜರಾತ್ ಮಾದರಿ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾರೆ. ಆದರೆ, ಕಳೆದ 5 ವರ್ಷಗಳಲ್ಲಿ ರಾಜಸ್ಥಾನದಲ್ಲಿ ಅಭಿವೃದ್ಧಿಯ ಹೊಸ ಪರ್ವವೇ ಶುರುವಾಗಿದೆ. ದೇಶದ ಒಕ್ಕೂಟ ರಚನೆಯ ಮೇಲೆ ಯಾವುದೇ ದಾಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳುವ ಪ್ರಧಾನಿ, ರಾಜ್ಯಗಳಿಗೆ ಏಕೆ ಕೇಂದ್ರ ಸರ್ಕಾರದಿಂದ ಬೆಂಬಲವನ್ನು ಕೊಡಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮೋದಿಯವರ ಈ 9 ವರ್ಷದ ಆಡಳಿತದಲ್ಲಿ ಭಾರತೀಯ ಸೇನೆ ಕೂಡ ರಾಜಕೀಯಗೊಂಡಿದೆ ಎಂದು ಗಂಭೀರ ಆರೋಪ ಮಾಡಿದ ರಮೇಶ್ಕುಮಾರ್, ಕಾಂಗ್ರೆಸ್ ನೇತೃತ್ವದ ಸರ್ಕಾರವು ಈ ಹಿಂದೆ ಜಾರಿಗೆ ತಂದ 15-20 ಯೋಜನೆಗಳ ಹೆಸರನ್ನು ಬದಲಿಸಿ, ಅದರ ಕ್ರೆಡಿಟ್ ಅನ್ನು ಮೋದಿ ಸರ್ಕಾರ ಪಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ರಾಹುಲ್ ಬಗ್ಗೆ ಮೋದಿ ಹೇಳಿದ್ದೇನು?: ಮಧ್ಯಪ್ರದೇಶದಲ್ಲಿ ಮಂಗಳವಾರ ನಡೆದ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು, ಹೆಸರೇಳದೇ ರಾಹುಲ್ ಗಾಂಧಿಯನ್ನು ಮೂರ್ಖರ ನಾಯಕ ಎಂದು ಟೀಕಿಸಿದ್ದರು. ದೇಶದಲ್ಲಿ ಚೀನಾ ಮೊಬೈಲ್ಗಳ ಸಂಖ್ಯೆಯೇ ಹೆಚ್ಚಿದೆ ಎಂದ ರಾಹುಲ್ ಹೇಳಿಕೆಯನ್ನು ಪ್ರಸ್ತಾಪಿಸಿದ ಮೋದಿ, ಕಾಂಗ್ರೆಸ್ನಲ್ಲಿನ ತಜ್ಞರೊಬ್ಬರಿಗೆ ದೇಶದಲ್ಲಿ ಆಗುವ ಮೊಬೈಲ್ ಉತ್ಪಾದನೆಗಳ ಬಗ್ಗೆ ಜ್ಞಾನವೇ ಇಲ್ಲ. ಅವರೊಬ್ಬ ಮೂರ್ಖರ ಸರದಾರ ಎಂದು ಟೀಕಿಸಿದ್ದರು.
ಇದನ್ನೂ ಓದಿ: ಹೆಚ್ಡಿಕೆ ಆರೋಪಕ್ಕೆ ದಾಖಲೆ ಸಮೇತ ತಿರುಗೇಟು ನೀಡಿದ ಸಿಎಂ