ಜಬಲ್ಪುರ(ಮಧ್ಯಪ್ರದೇಶ): ಮಕ್ಕಳು, ಸೊಸೆಗೆ ವೃದ್ಧ ತಂದೆ- ತಾಯಿ ಭಾರವಾಗಿ ಅವರನ್ನು ಮನೆಯಿಂದ ಆಚೆ ಹಾಕಿದ ಎಷ್ಟೋ ಘಟನೆಗಳು ಸಮಾಜದಲ್ಲಿ ನಡೆದಿವೆ. ಇಂತಹದ್ದೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆದರೆ, ಕೋರ್ಟ್ನ ಮಧ್ಯಸ್ಥಿಕೆ ಮತ್ತು ಎಚ್ಚರಿಕೆಯಿಂದ ಮಗ ತನ್ನ ತಪ್ಪಿನ ಅರಿವಾಗಿ ತಂದೆಯ ಕಾಲು ತೊಳೆದು ಪೂಜಿಸಿ ಮನೆಗೆ ಕರೆದೊಯ್ದ ಘಟನೆ ನಡೆದಿದೆ.
ವಿವರ: ಮಧ್ಯಪ್ರದೇಶದ ಜಬಲ್ಪುರದ 80 ವರ್ಷದ ಹಿರಿಯರಾದ ಆನಂದ್ಗಿರಿ ಎಂಬುವವರನ್ನು ಅವರ ಮಗ ಮತ್ತು ಸೊಸೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದಾರೆ. ಇದರಿಂದ ನಿರಾಶ್ರಿತರಾದ ಆನಂದ್ಗಿರಿ ಅವರು ತನಗಾದ ಅನ್ಯಾಯದ ವಿರುದ್ಧ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಕದ ತಟ್ಟಿದ್ದಾರೆ.
ತನ್ನನ್ನು ಮಗ ಮತ್ತು ಸೊಸೆ ಮನೆಯಿಂದ ಹೊರಹಾಕಿದ್ದಾರೆ. ತನಗೆ ನ್ಯಾಯ ಕೊಡಿಬೇಕು ಎಂದು ಆನಂದ್ಗಿರಿ ಅವರು ದೂರು ಸಲ್ಲಿಸಿದ್ದಾರೆ. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಆದ ಆಶಿಶ್ ಪಾಂಡೆ ಅವರು ತಕ್ಷಣವೇ ಆ ಹಿರಿಯ ಜೀವಿಯ ಮಗನನ್ನು ಸಂಪರ್ಕಿಸಿ ಆತನನ್ನು ಕಚೇರಿಗೆ ಕರೆಸಿಕೊಂಡಿದ್ದಾರೆ. ಬಳಿಕ ಘಟನೆಯ ವಿವರ ಪಡೆದು, ತಂದೆಯನ್ನು ಹೊರಹಾಕಿದ್ದಕ್ಕೆ ಛೀಮಾರಿ ಹಾಕಿದ್ದಾರೆ. ಅಲ್ಲದೇ, ಹೆತ್ತವರನ್ನು ಹೊರದಬ್ಬಿದ ಆರೋಪದ ಮೇಲೆ ಕಠಿಣ ಕ್ರಮಕ್ಕೆ ಸೂಚಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾಲ್ತೊಳೆದು ಕ್ಷಮೆ ಕೋರಿದ ಮಗ: ಇನ್ನು ತನ್ನ ಹೆತ್ತಪ್ಪನ ಜೊತೆ ಅಮಾನವೀಯವಾಗಿ ನಡೆದುಕೊಂಡ ಮಗ ಮ್ಯಾಜಿಸ್ಟ್ರೇಟರ್ ಮಾತಿನಿಂದ ಬದಲಾಗಿ ತನ್ನ ತಂದೆಯನ್ನು ಜೊತೆಗೆ ಕರೆದೊಯ್ಯಲು ಒಪ್ಪಿಕೊಂಡಿದ್ದಾರೆ. ಅಲ್ಲದೇ ಎಸ್‌ಡಿಎಂ ಆವರಣದಲ್ಲೇ ತಂದೆಯ ಕಾಲುಗಳನ್ನು ತೊಳೆದು ನಮಸ್ಕರಿಸಿ ಕ್ಷಮೆ ಕೋರಿದ್ದಾರೆ. ಇನ್ನು ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ಜನರೆಲ್ಲರೂ ಈ ದೃಶ್ಯವನ್ನು ನೋಡಿ ಎಸ್‌ಡಿಎಂ ಕಾರ್ಯವನ್ನು ಶ್ಲಾಘಿಸಿದರು. ಮಗ ಕ್ಷಮೆಯಾಚಿಸಿದ ನಂತರ ತಂದೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದು ಮಗನ ಜೊತೆ ಆತನ ಮನೆಗೆ ತೆರಳಿದ್ದಾರೆ. ಅಲ್ಲದೇ, ಮಗನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಕೋರಿದ್ದಾರೆ. ಇದಲ್ಲವೇ ಅಪ್ಪ ಅಂದ್ರೆ.
ಓದಿ: ಇದು ವಸಾಹತುಶಾಹಿ ಯುಗವೇ.. ವ್ಯಕ್ತಿಯ ಕೈಯಿಂದ ಕಾಲಿನ ಕವರ್ ತೆಗೆಸಿದ ಯುಪಿ ಸಚಿವೆ ವಿರುದ್ಧ ಭಾರಿ ಟೀಕೆ