ಜಬಲ್ಪುರ/ನಾಗ್ಪುರ: 10 ವರ್ಷಗಳ ಹಿಂದೆ ಶಾಲೆಗೆ ಬಂಕ್ ಹೊಡೆದು ಹೊರ ಹೋಗಿದ್ದ ಬಾಲಕ ಮತ್ತೆ ಮರಳಿ ಬರಲೇ ಇಲ್ಲ. ಇತ್ತ, ಗಾಬರಿಯಾದ ಪೋಷಕರು ಕಾಣೆಯಾಗಿರುವ ತಮ್ಮ ಮಗನನ್ನು ಹುಡುಕಿ ಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ, ಪೊಲೀಸರು ಬಾಲಕನನ್ನು ಪತ್ತೆ ಹಚ್ಚುವಲ್ಲಿ ವಿಫಲರಾದರು. ಏಕೆಂದರೆ, ಆ ಸಮಯದಲ್ಲಿ ಬಾಲಕ ಜಬಲ್ಪುರದಿಂದ ರೈಲು ಹತ್ತಿ ನಾಗ್ಪುರಕ್ಕೆ ಬಂದಿದ್ದ. ಅನಾಥಾಶ್ರಮವೊಂದರಲ್ಲಿ ಆಶ್ರಯ ಪಡೆಯುತ್ತಿದ್ದ ಬಾಲಕನನ್ನು ಕೆಲ ದಿನಗಳ ಹಿಂದೆ ನಾಗ್ಪುರದ ದಾಮ್ಲೆ ಕುಟುಂಬ ದತ್ತು ಪಡೆದಿತ್ತು.
ಅಮೀರ್, ಅಮನ್ ಆಗಿ ಬದಲಾದ ಕಥೆ!
9 ವರ್ಷಗಳ ಹಿಂದೆ ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನು ಪೊಲೀಸರು ಅನಾಥಾಶ್ರಮಕ್ಕೆ ಸೇರಿಸಿದ್ದರು. 2012 ರಲ್ಲಿ ನಾಗ್ಪುರದ ಸಮರ್ಥ್ ದಾಮ್ಲೆ ದಂಪತಿ ಬಾಲಕನನ್ನು ದತ್ತು ಪಡೆದು ಅಮನ್ ಎಂದು ಹೆಸರಿಟ್ಟರು. ಅಮೀರ್, ದಾಮ್ಲೆ ಕುಟುಂಬದೊಂದಿಗೆ ಬೆರೆತು ಅವರಲ್ಲಿ ಇವನೂ ಒಬ್ಬನಾದ. ಮಾನಸಿಕ ಅಸ್ವಸ್ಥನಾಗಿದ್ದ ಅಮನ್ಗೆ ಸಮರ್ಥ್ ಅವರು ಚಿಕಿತ್ಸೆ ಕೊಡಿಸಿ ಮಾಮೂಲಿ ವ್ಯಕ್ತಿಯನ್ನಾಗಿಸಿದ್ರು. 18 ವರ್ಷ ತುಂಬುವವರೆಗೆ ಅಮೀರ್ ಸಮರ್ಥ್ ದಾಮ್ಲೆ ಕುಟುಂಬದೊಂದಿಗೆ ವಾಸವಿದ್ದ.
ಆಧಾರ್ನಿಂದ ಸಿಕ್ಕ ಪೋಷಕರು!
ಕೆಲವು ದಿನಗಳ ಹಿಂದೆ ಸಮರ್ಥ್ ತಮ್ಮ ಮಗ ಅಮನ್ ಆಧಾರ್ ಕಾರ್ಡ್ ಮಾಡಿಸಲು ಮಂಕಾಪುರದ ಆಧಾರ್ ಸೇವಾ ಕೇಂದ್ರಕ್ಕೆ ತೆರಳಿದ್ರು. ಅಮನ್ ಬೆರಳಚ್ಚು ತೆಗೆದುಕೊಂಡಾಗ ಇವರ ಆಧಾರ್ ಈಗಾಗಲೇ ನೋಂದಣಿಯಾಗಿದೆ. ಮಧ್ಯಪ್ರದೇಶದ ಜಬಲ್ಪುರ ಮೂಲದ ಈತ ಅಮನ್ ಅಲ್ಲ ಅಮೀರ್ ಎಂದು ಕೇಂದ್ರದ ವ್ಯವಸ್ಥಾಪಕ ಅನಿಲ್ ಮರಾಠೆಯುವರು ಸಮರ್ಥ್ ದಾಮ್ಲೆಗೆ ತಿಳಿಸಿದ್ರು.
ಹೆತ್ತವರ ಮಡಿಲು ಸೇರಿದ ಮಗ
ವಿಚಾರ ತಿಳಿದ ಸಮರ್ಥ್ ದಂಪತಿ, ಪೊಲೀಸರ ಸಹಾಯದಿಂದ ನಿಜವಾದ ಪೋಷಕರನ್ನು ಪತ್ತೆ ಮಾಡಿ ಅಮೀರ್ ರನ್ನು ಅವರಿಗೆ ಒಪ್ಪಿಸಿದರು. ಇದೀಗ ಅಮೀರ್ ತನ್ನ ಕುಟುಂಬಸ್ಥರ ಮಡಿಲು ಸೇರಿದ್ದಾನೆ.