ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾ ಅವರ ನೇತೃತ್ವದಲ್ಲಿ ದಿಲ್ಲಿಯಲ್ಲಿ ಇಂದು ಸಂಜೆ 5 ಗಂಟೆಗೆ ಉನ್ನತ ನಾಯಕರ ಸಭೆ ನಡೆಯಲಿದೆ. ಸಭೆಯಲ್ಲಿ ಕರ್ನಾಟಕ ವಿಧಾನಸಭೆ ಚುಣಾವಣೆಯ ಬಗ್ಗೆ ಚರ್ಚೆ ನಡೆಯಲಿದೆ. ಪಕ್ಷವು ಚುನಾವಣೆಗೆ ತಂತ್ರ ರೂಪಿಸಲಿದೆ ಎಂದು ತಿಳಿದು ಬಂದಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿವೆ. ಬಿಜೆಪಿ ಹುರಿಯಾಳುಗಳ ಆಯ್ಕೆಗಾಗಿ ಮೂರು ಹಂತದಲ್ಲಿ ಸಭೆ ನಡೆಸುತ್ತಿದೆ. ಇದರ ಭಾಗವಾಗಿ ಈಗಾಗಲೇ 2 ಕೋರ್ ಕಮಿಟಿ ಸಭೆಗಳು ಮುಗಿದಿವೆ. ಮೂರನೇ ಸಭೆ ಇಂದು ಮತ್ತು ನಾಳೆ ನಡೆಯಲಿದೆ. ಈ ನಡುವೆಯೇ ದಿಲ್ಲಿಯಲ್ಲಿ ಜೆ ಪಿ ನಡ್ಡಾ ಅವರು ಸಭೆ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ.
ಕರ್ನಾಟಕದಲ್ಲಿ ಸತತ ಸಭೆ: ಚುನಾವಣಾಕಾಂಕ್ಷಿಗಳು ಹೆಚ್ಚಿದ ಕಾರಣ ಸೂಕ್ತ ಅಭ್ಯರ್ಥಿಯ ಆಯ್ಕೆಯಾಗಿ ಬಿಜೆಪಿ ಮೂರು ಹಂತದಲ್ಲಿ ಕೋರ್ ಕಮಿಟಿ ಸಭೆಯನ್ನು ನಡೆಸುತ್ತಿದೆ. ಇದರಲ್ಲಿ ಸುದೀರ್ಘ ಚರ್ಚೆಯ ನಂತರ ಅಭ್ಯರ್ಥಿಗಳನ್ನು ಪಟ್ಟಿಯನ್ನು ಸಿದ್ಧ ಮಾಡಿ ಕೇಂದ್ರ ಸಂಸದೀಯ ಮಂಡಳಿಗೆ ಕಳುಹಿಸಲಾಗುತ್ತದೆ. ಅಲ್ಲಿ ಅಭ್ಯರ್ಥಿಗಳ ಅಖೈರು ಆಗಲಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ: ಗ್ರೌಂಡ್ ರಿಯಾಲಿಟಿ ಆಧಾರದಲ್ಲಿ, ಪ್ರಜಾಪ್ರಭುತ್ವ ಮಾದರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಇಂದು ಮತ್ತು ನಾಳೆ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿ ಹೈಕಮಾಂಡ್ಗೆ ಕಳುಹಿಸಿಕೊಡಲಾಗುವುದು. ಏಪ್ರಿಲ್ 8 ರಂದು ಕೇಂದ್ರ ಸಂಸದೀಯ ಮಂಡಳಿ ಸಭೆಯಲ್ಲಿ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ರಾಜ್ಯ ಸಮಿತಿ ಸಭೆ ಇದೆ. ಎರಡು ದಿನ ಸಭೆ ಮಾಡುತ್ತೇವೆ. ಮೊನ್ನೆ ಎರಡು ದಿನ ಮಾಡಿದ ಚರ್ಚೆಯ ಮುಂದುವರೆದ ಭಾಗ ಇದಾಗಿದ್ದು, ಮತ್ತೊಮ್ಮೆ ಪಟ್ಟಿಯನ್ನು ಪರಿಶೀಲನೆ ಮಾಡಿ ಕೇಂದ್ರಕ್ಕೆ ಕಳಿಸಲಾಗುತ್ತದೆ, ಏಪ್ರಿಲ್ 8 ರಂದು ಕೇಂದ್ರ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆಯಾಗಿ ಅಂತಿಮ ಪಟ್ಟಿ ಹೊರಬರಲಿದೆ. ಹಲವಾರು ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರು ಅತ್ಯಂತ ಉತ್ಸಾಹದಲ್ಲಿದ್ದಾರೆ. ಕಳೆದ ಮೂರು ನಾಲ್ಕು ತಿಂಗಳ ಬೆಳವಣಿಗೆ ಗಮನಿಸಿದಾಗ ಸಂಪೂರ್ಣ ಬಹುಮತ ಬರುವ ಎಲ್ಲ ಲಕ್ಷಣ ಇವೆ. ಟಿಕೆಟ್ ಕೊಡುವ ವ್ಯವಸ್ಥೆ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಮಾಡಲಾಗಿದೆ. ಸರಳವಾಗಿ ಟಿಕೆಟ್ ಹಂಚಿಕೆ ಆಗಲಿದೆ ಎಂದು ಹೇಳಿದರು.
ಇನ್ನೊಂದೆಡೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೆಳಗಾವಿಯಲ್ಲಿ ಮಾತನಾಡಿ ಏ.8 ಅಥವಾ 9 ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದರು. ಆಕಾಂಕ್ಷಿಗಳು ಹೆಚ್ಚಿರುವ ಕಡೆ ಗೊಂದಲ ಇರುವುದಿಲ್ಲ. ಕೆಲ ಕ್ಷೇತ್ರಗಳಲ್ಲಿ ಹಲವು ಆಕಾಂಕ್ಷಿಗಳು ಇದ್ದು, ಅಂಥ ಕ್ಷೇತ್ರಗಳಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಪಕ್ಷ ತಿಳಿಸಿದೆ.
ಓದಿ: ಆಕಾಂಕ್ಷಿಗಳ ಬೆಂಬಲಿಗರಿಂದ ಪ್ರತಿಭಟನೆ ಆತಂಕ: ಪಕ್ಷದ ಕಚೇರಿಯಿಂದ ಖಾಸಗಿ ರೆಸಾರ್ಟ್ಗೆ ಸಭೆ ಶಿಫ್ಟ್!