ಶ್ರೀನಗರ, ಜಮ್ಮು ಮತ್ತು ಕಾಶ್ಮೀರ : ಬೆಳ್ಳಬೆಳಗ್ಗೆ ನಡೆದ ಪ್ರತ್ಯೇಕ ಮೂರು ಎನ್ಕೌಂಟರ್ಗಳಲ್ಲಿ ನಾಲ್ವರು ಉಗ್ರರು ಹತ್ಯೆ ಮಾಡಲಾಗಿದ್ದು, ಇಬ್ಬರು ಜೈಷ್ ಎ ಮೊಹಮದ್ ಮತ್ತು ಮತ್ತಿಬ್ಬರು ಉಗ್ರರು ಲಷ್ಕರ್ ಎ ತೋಯ್ಬಾ ಸಂಘಟನೆಗೆ ಸೇರಿದವರು ಎಂದು ಕಾಶ್ಮೀರ ಐಜಿಪಿ ಮಾಹಿತಿ ನೀಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಶುಕ್ರವಾರದಿಂದ ನಾಲ್ಕೈದು ಸ್ಥಳಗಳಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಪುಲ್ವಾಮಾ, ಗಂದೇರ್‌ಬಾಲ್ ಮತ್ತು ಹಂದ್ವಾರಾದಲ್ಲಿ ನಡೆದ ಎನ್ಕೌಂಟರ್ಗಳಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಪುಲ್ವಾಮದಲ್ಲಿ ಇಬ್ಬರು ಜೈಷ್ ಎ ಮೊಹಮದ್ ಉಗ್ರರನ್ನು ಹತ್ಯೆ ಮಾಡಲಾಗಿದೆ. ಹಂದ್ವಾರಾದ ರಾಜ್ವಾರ್ ಪ್ರದೇಶದ ನೇಚಮಾದಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಕಾಶ್ಮೀರದ ಪೊಲೀಸರು ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ. ಮತ್ತೊಂದು ಎನ್ಕೌಂಟರ್ ಗಂದೇರ್‌ಬಾಲ್ ಪ್ರದೇಶದಲ್ಲಿ ನಡೆದಿದೆ. ಲಷ್ಕರ್-ಏ-ತೊಯ್ಬಾ ಭಯೋತ್ಪಾದಕನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಗಳು ಹೊಡೆದುರುಳಿಸಿವೆ.
ಇದಕ್ಕೂ ಮುನ್ನ ಕುಲ್ಗಾಮ್ ಜಿಲ್ಲೆಯ ಔಡೋರಾ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಸರಪಂಚ್ನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಇದು ಕುಲ್ಗಾಂ ಜಿಲ್ಲೆಯಲ್ಲಿ ಭಯೋತ್ಪಾದಕರ ಮೂರನೇ ದಾಳಿಯಾಗಿದೆ.
ಇದನ್ನೂ ಓದಿ: ಕುಲ್ಗಾಮ್: ಬಿಜೆಪಿ ಸರಪಂಚ್ನನ್ನು ಗುಂಡಿಕ್ಕಿ ಕೊಂದ ಉಗ್ರರು