ಶ್ರೀನಗರ, ಜಮ್ಮು ಕಾಶ್ಮೀರ : ಪುಲ್ವಾಮಾ ಜಿಲ್ಲೆಯಲ್ಲಿ ಅಪರಿಚಿತ ಬಂದೂಕುದಾರಿಗಳು ಗುಂಡು ಹಾರಿಸಿದ ಪರಿಣಾಮದಿಂದಾಗಿ ಓರ್ವ ಪೊಲೀಸ್ ಸಿಬ್ಬಂದಿಗೆ ಗಾಯವಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಜೆ 7 ಗಂಟೆಗೆ ಬಂಡೂಜ್ ಪುಲ್ವಾಮಾ ಬಳಿ ಅಪರಿಚಿತ ಬಂದೂಕುದಾರಿಗಳು ಗುಂಡು ಹಾರಿಸಿದ ಪರಿಣಾಮದಿಂದಾಗಿ ಮುಸ್ತಾಖ್ ಅಹ್ಮದ್ ವಾಗೆ ಎಂಬಾತನ ಕಾಲಿಗೆ ಗಾಯವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ವಾಗೆ ಪುಲ್ವಾಮಾದಲ್ಲಿರುವ ಡಿಪಿಎಲ್ನಲ್ಲಿ ವಾಷರ್ಮನ್ ಆಗಿ ಕೆಲಸ ಮಾಡುತ್ತಿದ್ದ. ಸ್ಥಳೀಯರೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ತಿಳಿದಿ ಬಂದಿದೆ. ಈಗ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರದ ಎಸ್ಎಂಹೆಚ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುವಿನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ದಾಳಿಯ ನಂತರ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರೆದಿವೆ. ದಾಳಿಕೋರರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿದು ಬಂದಿದೆ.
ಐಇಡಿ ತಯಾರಿಕಾ ಸಾಮಗ್ರಿ ಪತ್ತೆ : ಪುಲ್ವಾಮಾ ಪ್ರದೇಶದ ಬುಚೂ ಗ್ರಾಮದ ಅರಣ್ಯದಲ್ಲಿ ಐಇಡಿ ತಯಾರಿಕೆಗೆ ಬಳಕೆಯಾಗುವ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.
ಯೂರಿಯಾ ಇರುವ ಒಂದು ಟಿನ್ ಕಂಟೇನರ್ ಹಾಗೂ ವೈಯರ್ ಪತ್ತೆಯಾಗಿದೆ. ಇದನ್ನು ಸುಧಾರಿತ ಸ್ಫೋಟಕ ಸಾಧನ (ಐಇಡಿ) ತಯಾರಿಕೆಗೆ ಬಳಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಶ್ರೀನಗರದಲ್ಲಿ ಪಾಕಿಸ್ತಾನದ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆಗಳು