ಶ್ರೀನಗರ: ಜಮ್ಮು- ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಉಗ್ರರು ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬುಧವಾರ ನಡೆದಿದೆ..
ರಾಕೇಶ್ ಪಂಡಿತ ಎಂಬ ಬಿಜೆಪಿ ಕೌನ್ಸಿಲರ್ ತಮ್ಮ ಮನೆಯಲ್ಲಿದ್ದಾಗಲೇ ಬುಧವಾರ ಸಂಜೆ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಈ ದಾಳಿಯಲ್ಲಿ ಮಹಿಳೆಯೊಬ್ಬರೂ ಗಾಯಗೊಂಡಿದ್ದಾರೆ. ಮಹಿಳೆಯನ್ನು ಪಂಡಿತ್ರ ಸ್ನೇಹಿತನ ಮಗಳೆಂದು ತಿಳಿದುಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
" ರಾತ್ರಿ 10 ರ ಸುಮಾರಿಗೆ, ಸ್ಥಳೀಯ ಬಿಜೆಪಿ ಮುಖಂಡ ರಾಕೇಶ್ ಪಂಡಿತ್ ಮೇಲೆ ಟ್ರಾಲ್ನಲ್ಲಿರುವ ಅವರ ಮನೆಯ ಹೊರಗಡೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ಸಮಯದಲ್ಲಿ ಪಂಡಿತ್ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಪುಲ್ವಾಮಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ" ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪಂಡಿತ್ ಹತ್ಯೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಪಂಡಿತ್ ಟ್ರಾಲ್ನ ಮುನ್ಸಿಪಲ್ ಕೌನ್ಸಿಲರ್ ಆಗಿದ್ದರು. ಅಲ್ಲದೆ ಅವರು ಕಾಶ್ಮೀರಿ ಪಂಡಿತರ ಏಕೈಕ ನಾಯಕರಾಗಿದ್ದರು. ಕಳೆದ ವಾರ ಅವರ ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ಅವರು ಟ್ರಾಲ್ಗೆ ಆಗಮಿಸಿದ್ದರು ಎಂದು ಬಿಜೆಪಿ ವಕ್ತಾರ ಮಂಜೂರ್ ಭಟ್ ಹೇಳಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಮತ್ತು ಸಿಆರ್‌ಪಿಎಫ್ ಪಡೆ ಧಾವಿಸಿ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದೆ. ಮೂವರು ಉಗ್ರರು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇದನ್ನು ಒದಿ:ಸಾಗರ್ ಧಂಕರ್ ಹತ್ಯೆ ಕೇಸ್: ಸುಶೀಲ್ ಕುಮಾರ್& ಸಹಚರನಿಗೆ 14 ದಿನ ನ್ಯಾಯಾಂಗ ಬಂಧನ