ಮಲಪ್ಪುರಂ (ಕೇರಳ): ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕಾಯ್ದೆಯನ್ನು ವಿರೋಧಿಸುವ ವಿಪಕ್ಷಗಳ ನಡುವೆಯೇ ಒಮ್ಮತ ಮೂಡಿಬಂದಿಲ್ಲ. ಕೇರಳದಲ್ಲಿ ಆಡಳಿತಾರೂಢ ಸಿಪಿಐ(ಎಂ) ಆಯೋಜಿಸುತ್ತಿರುವ ಯುಸಿಸಿ ವಿರೋಧಿ ಸಭೆಗೆ ಕಾಂಗ್ರೆಸ್ ಪಕ್ಷವನ್ನು ಆಹ್ವಾನಿಸಿಲ್ಲ. ಇದರಿಂದ ಮುನಿಸಿಕೊಂಡಿರುವ ಕೈ ಮಿತ್ರ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಸಭೆಯಿಂದ ದೂರವಿರುವುದಾಗಿ ಘೋಷಿಸಿದೆ.
ತೀವ್ರ ಚರ್ಚೆಗೆ ಒಳಗಾಗಿರುವ ಏಕರೂಪ ನಾಗರಿಕ ಸಂಹಿತೆ ಕುರಿತ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ಕಾಂಗ್ರೆಸ್ಗೆ ಕೇರಳ ಸರ್ಕಾರ ಆಹ್ವಾನ ನೀಡಿಲ್ಲ. ದೇಶದ ಅತ್ಯಂತ ಹಳೆಯ ಪಕ್ಷವನ್ನು ಹೊರಗಿಟ್ಟು ಈ ಕುರಿತ ಸಭೆ ನಡೆಸುವುದು ಸಾಧ್ಯವಿಲ್ಲ. ಹೀಗಾಗಿ ತಾನೂ ಈ ವಿಚಾರ ಸಂಕಿರಣಗಳ ಭಾಗವಾಗುವುದಿಲ್ಲ ಎಂದು ಹೇಳಿದೆ.
ಇಲ್ಲಿನ ಪಾಲಕ್ಕಾಡ್‌ನಲ್ಲಿ ಭಾನುವಾರ ನಡೆದ ಐಯುಎಂಎಲ್ ಸಭೆಯ ನಂತರ ರಾಜ್ಯಾಧ್ಯಕ್ಷ ಸಯ್ಯದ್ ಸಾದಿಕ್ ಅಲಿ ಶಿಹಾಬ್ ತಂಗಳ್ ಸಿಪಿಐ(ಎಂ) ಆಹ್ವಾನವನ್ನು ತಿರಸ್ಕರಿಸಲು ನಿರ್ಧರಿಸಿದ್ದಾಗಿ ಘೋಷಿಸಿದರು. ಇದು ಆಡಳಿತ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿದೆ. ತನ್ನ ನೇತೃತ್ವದ ಸೆಮಿನಾರ್‌ಗಳಲ್ಲಿ ಕಾಂಗ್ರೆಸ್ ಹೊರತಾದ ವಿಪಕ್ಷಗಳ ಸೇರಿಸುವ ಯತ್ನಕ್ಕೆ ಹೊಡೆತ ಬಿದ್ದಂತಾಗಿದೆ.
ಕಾಂಗ್ರೆಸ್ಗೆ ಸ್ಪಷ್ಟ ನಿಲುವಿಲ್ಲ: ಇದಕ್ಕೂ ಹಿಂದಿನ ದಿನ, ಸಚಿವರಿಬ್ಬರು ಈ ಬಗ್ಗೆ ಮಾಹಿತಿ ನೀಡಿ, ಯುಸಿಸಿ ಬಗ್ಗೆ ಜಾಗೃತಿ ಮೂಡಿಸಲು ಎಡಪಕ್ಷದಿಂದ ರಾಜ್ಯಾದ್ಯಂತ ನಡೆಯಲಿರುವ ವಿಚಾರ ಸಂಕಿರಣಗಳಿಗೆ ಐಯುಎಂಎಲ್ ಪಕ್ಷವನ್ನು ಸೇರಿಸಿಕೊಳ್ಳಲಾಗಿದೆ ಎಂದಿದ್ದರು. ಅಲ್ಲದೇ, ಕಾಂಗ್ರೆಸ್ ಸಂಹಿತೆ ಬಗ್ಗೆ ಸ್ಪಷ್ಟವಾದ ನಿಲುವನ್ನು ಹೊಂದಿಲ್ಲ. ಆಯಾ ರಾಜ್ಯಗಳಲ್ಲಿ ವಿಭಿನ್ನ ನಿಲುವನ್ನು ಹೊಂದಿದೆ. ಹೀಗಾಗಿ ಸೆಮಿನಾರ್ಗಳಿಂದ ಪಕ್ಷವನ್ನು ಹೊರಗಿಡಲಾಗಿದೆ ಎಂದಿದ್ದರು.
ಅಖಿಲ ಭಾರತ ಮುಸ್ಲಿಂ ಲೀಗ್ನ ನಾಯಕತ್ವ, ಯುಸಿಸಿ ವಿರುದ್ಧ ವಿಚಾರಗೋಷ್ಠಿಗಳು ಅಥವಾ ಕಾರ್ಯಕ್ರಮಗಳನ್ನು ನಡೆಸಲು ಪ್ರತಿ ಪಕ್ಷಗಳಿಗೂ ಸ್ವಾತಂತ್ರ್ಯವಿದೆ. ಪಕ್ಷ ಅಥವಾ ಧಾರ್ಮಿಕ ಸಂಸ್ಥೆಗಳು ಅದರಲ್ಲಿ ಪಾಲ್ಗೊಳ್ಳುವ ಅಥವಾ ಗೈರಾಗುವ ಸ್ವಾತಂತ್ರ್ಯವನ್ನು ಹೊಂದಿವೆ. ನಾವು ಯುಡಿಎಫ್‌ನ ಪ್ರಮುಖ ಮಿತ್ರರಾಗಿದ್ದೇವೆ. ಯಾವುದೇ ಯುಡಿಎಫ್ ಸದಸ್ಯರನ್ನು ಸಿಪಿಐ(ಎಂ) ತನ್ನ ಸೆಮಿನಾರ್‌ಗೆ ಆಹ್ವಾನಿಸದಿದ್ದರೆ, ನಾವು ಕೂಡ ಅದರಲ್ಲಿ ಭಾಗವಹಿಸುವುದಿಲ್ಲ ಎಂದು ಸಾರಿದೆ.
'ಕೈ' ಪಕ್ಷ ಬಿಟ್ಟು ಬರಲ್ಲ: ಕಾಂಗ್ರೆಸ್ ಪಕ್ಷವನ್ನು ಬದಿಗಿಟ್ಟು ಯುಸಿಸಿ ವಿರುದ್ಧ ಯಾರೂ ಮುಂದುವರಿಯಲು ಸಾಧ್ಯವಿಲ್ಲ. ಮೇಲಾಗಿ, ಕಾಂಗ್ರೆಸ್ ಸೆಮಿನಾರ್‌ನಲ್ಲಿ ಭಾಗವಹಿಸದೇ ಇರುವುದು ಕೇರಳದ ರಾಜಕೀಯ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಇದೇ ವೇಳೆ, ಮುಸ್ಲಿಂ ಲೀಗ್ ಸೆಮಿನಾರ್ಗಳಿಗೆ ಭಾಗವಹಿಸಲು ನಿರಾಕರಿಸಿದರೆ, ಸುನ್ನಿ ಮುಸ್ಲಿಂ ವಿಧ್ವಾಂಸರು ಮತ್ತು ಧರ್ಮಗುರುಗಳ ಪ್ರಭಾವಿ ಧಾರ್ಮಿಕ ಸಂಘಟನೆಯಾದ ಸಮಸ್ತ ಕೇರಳ ಜಮ್‌ಇಯ್ಯತುಲ್ ಉಲಮಾ ಸಿಪಿಐ(ಎಂ) ನಡೆಸುವ ಸಭೆಗಳಲ್ಲಿ ಭಾಗವಹಿಸುವುದಾಗಿ ಹೇಳಿದೆ. ಮುಂದಿನ ವಾರದಿಂದ ಈ ಸಭೆಗಳು ನಡೆಯಲಿವೆ.
ಸೆಮಿನಾರ್ಗಳಿಂದ ತನ್ನನ್ನು ಕೈ ಬಿಟ್ಟಿದ್ದಕ್ಕೆ ಸಿಪಿಐ(ಎಂ)ನ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಎಡ ಪಕ್ಷವು ಯುಸಿಸಿಯನ್ನು ರಾಜಕೀಯ ಮೈಲೇಜ್ಗಾಗಿ ಬಳಸಿಕೊಳ್ಳಲು ಅದನ್ನು ಹಿಂದೂ ಮತ್ತು ಮುಸ್ಲಿಂ ವಿಷಯವಾಗಿ ಪರಿವರ್ತಿಸುತ್ತಿದೆ ಎಂದು ಆರೋಪಿಸಿದೆ.
ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಹಿಂದೂ ರಾಷ್ಟ್ರ ಪರಿಕಲ್ಪನೆಯೊಂದಿಗೆ ಸಂಬಂಧ ಹೊಂದಿದೆ: ಅಮರ್ತ್ಯ ಸೇನ್