ಪುಣೆ (ಮಹಾರಾಷ್ಟ್ರ): ಒಲಿಂಪಿಕ್ನಲ್ಲಿ ಇತರ ದೇಶಗಳ ಹಿಂದಿಕ್ಕಲು ಭಾರತಕ್ಕೆ ಇನ್ನೂ 100 ವರ್ಷ ಬೇಕಾಗುತ್ತದೆ ಎಂದು ಅರ್ಜುನ ಪ್ರಶಸ್ತಿ ವಿಜೇತ ಭಾರತೀಯ ಕುಸ್ತಿಪಟು ಪೈಲ್ವಾನ್ ಕಾಕಾ ಪವಾರ್ ಹೇಳಿದ್ದಾರೆ. ನಮಗೆ ಒಲಿಂಪಿಕ್ನಲ್ಲಿ ಭಾಗವಹಿಸಲು ಬೇಕಾದ ಪೂರ್ವತಯಾರಿ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ ಎಂದಿದ್ದಾರೆ.
ನಮ್ಮ ದೇಶದಲ್ಲಿ ಕ್ರೀಡೆಗಾಗಿ ನಿರ್ಮಿಸಲಾದ ಮೈದಾನಗಳನ್ನು ಬೇರೆ ಕಾರಣಗಳಿಗೆ ಹೆಚ್ಚು ಬಳಸಲಾಗುತ್ತದೆ. ಅಂದರೆ ಮದುವೆಗಳಿಗಾಗಿ, ರಾಜಕೀಯ ಸಮಾವೇಶಗಳಂತಹ ಕಾರ್ಯಕ್ಕೆ ಬಳಕೆಯಾಗುತ್ತದೆ. ಕೆಲ ಮೈದಾನಗಳು ಕ್ರೀಡೆಗೆ ಮೀಸಲಿಟ್ಟರೂ ಕ್ರೀಡಾಪಟುಗಳಿಗೆ ಸರಿಯಾದ ಸೌಲಭ್ಯ ದೊರೆಯುತ್ತಿಲ್ಲ. ಜೊತೆಗೆ ಅರ್ಹ ತರಬೇತುದಾರರ ಕೊರತೆಯು ನಮ್ಮಲ್ಲಿದೆ ಎಂದಿದ್ದಾರೆ.
ಕೆಲ ವರ್ಷಗಳ ಹಿಂದೆ ಚೀನಾ ಸಹ ಕ್ರೀಡೆಯಲ್ಲಿ ಹಿಂದೆ ಬಿದ್ದಿತ್ತು, ಆದರೆ, ಇದೀಗ ಚೀನಾ ಸಹ ಕ್ರೀಡೆಯಲ್ಲಿ ಬಲಿಷ್ಟವಾಗಿದೆ. ಒಲಿಂಪಿಕ್ನಲ್ಲಿ ಮೊದಲ ಸ್ಥಾನಕ್ಕೇರಲು ಚೀನಾ ಸಾಕಷ್ಟು ಕಷ್ಟಪಟ್ಟಿದೆ. ಭಾರತ ಇಂದಿಗೂ ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ಹಿಂದೆ ಬಿದ್ದಿದೆ. ಭಾರತವು ಉಳಿದ ರಾಷ್ಟ್ರಗಳ ಹಿಂದಿಕ್ಕಲು ಇನ್ನೂ 100 ವರ್ಷ ಹಿಡಿಯಬಹುದು ಎಂದಿದ್ದಾರೆ. ಭಾರತದಲ್ಲಿ ಕ್ರೀಡೆಯ ನಡುವೆ ರಾಜಕೀಯ ವ್ಯಕ್ತಿಗಳ ಪ್ರವೇಶ ನಿಲ್ಲಬೇಕು ಎಂದಿದ್ದಾರೆ.
ಕ್ರೀಡಾ ಮೈದಾನಗಳು ಕೇವಲ ಕ್ರೀಡೆಗಳಿಗಾಗಿ ಮಾತ್ರ ಬಳಕೆಯಾಗಬೇಕು. ಎಲ್ಲ ಕ್ರೀಡಾಪಟುಗಳಿಗೂ ಮೂಲ ಸೌಕರ್ಯ ಸಿಗುವಂತಾಗಬೇಕು ಎಂದಿದ್ದಾರೆ.
ಓದಿ: ಪದಕ ರಹಿತವಾಗಿ ಬಂದಿದ್ದಕ್ಕೆ ಕ್ಷಮೆ ಕೋರುವೆ: ಒಲಿಂಪಿಕ್ಸ್ನಲ್ಲಿ ನನಗೆ 'ಮಹಾಮೋಸ' ಎಂದ ಮೇರಿ ಕೋಮ್!