ನವದೆಹಲಿ: ದೇಶದಲ್ಲಿ ಬುಲ್ಡೋಜರ್ ಬಳಕೆ ಕುರಿತ ವಾಗ್ಯುದ್ಧ, ಆರೋಪ-ಪ್ರತ್ಯಾರೋಪಗಳು ನಡೆಯುತ್ತಿರುವ ಮಧ್ಯೆ ಬಿಜೆಪಿ ಭಾನುವಾರ ಕಾಂಗ್ರೆಸ್‌ಗೆ ತಿರುಗೇಟು ನೀಡಿದೆ. ತುರ್ಕಮನ್ ಗೇಟ್‌ನಲ್ಲಿ ಅಲ್ಪಸಂಖ್ಯಾತರ ಮೇಲೆ ಬುಲ್ಡೋಜರ್ ಬಳಕೆಗೆ ಮೊದಲು ಆದೇಶ ನೀಡಿದ್ದು ಇಂದಿರಾ ಗಾಂಧಿ ಎಂದು ಹೇಳಿದೆ.
ಸರಣಿ ಟ್ವೀಟ್‌ಗಳಲ್ಲಿ, ಬಿಜೆಪಿಯ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಉಸ್ತುವಾರಿ ಅಮಿತ್ ಮಾಳವಿಯಾ ಅವರು ಕಾಂಗ್ರೆಸ್ ಪಕ್ಷದ ಮನೀಶ್ ತಿವಾರಿಯಿಂದ ರಾಹುಲ್ ಗಾಂಧಿಯವರೆಗೆ ಎಲ್ಲರೂ ಮರೆವು ಕಾಯಿಲೆಯಿಂದ ಬಳಲುತ್ತಿದ್ದಾರೆಯೇ ಅಥವಾ ಅವರಿಗೆ ತಮ್ಮದೇ ಗತಕಾಲದ ಬಗ್ಗೆ ಸರಿಯಾಗಿ ತಿಳಿದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಹಿಂದೆ ನಾಜಿಗಳು ಮತ್ತು ಯಹೂದಿಗಳನ್ನು ಮರೆತುಬಿಡಿ, ಭಾರತದಲ್ಲಿ ತುರ್ಕ್‌ಮನ್ ಗೇಟ್‌ನಲ್ಲಿ ಅಲ್ಪಸಂಖ್ಯಾತರ ಮೇಲೆ ಬುಲ್ಡೋಜರ್‌ಗಳನ್ನು ಬಳಸಲು ಮೊದಲು ಆದೇಶಿಸಿದವರು ಇಂದಿರಾ ಗಾಂಧಿ ಎಂದು ಟ್ವೀಟ್ ಮಾಡಿದ್ದಾರೆ.
1976ರ ಏಪ್ರಿಲ್ನ ತುರ್ತು ಪರಿಸ್ಥಿತಿಯ ಸಮಯದಲ್ಲಿ, ಇಂದಿರಾ ಗಾಂಧಿಯವರ ಮಗ ಸಂಜಯ್ ಗಾಂಧಿ, ಮುಸ್ಲಿಂ ಪುರುಷರು ಮತ್ತು ಮಹಿಳೆಯರನ್ನು ಬಲವಂತವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಒತ್ತಾಯಿಸಿದ್ದರು. ಅದಕ್ಕೆ ಮುಸ್ಲಿಮರು ವಿರೋಧಿಸಿದಾಗ, ತುರ್ಕ್‌ಮನ್ ಗೇಟ್‌ನಲ್ಲಿ ಬುಲ್ಡೋಜರ್‌ಗಳಿಂದ ದಾಳಿ ಮಾಡಿಸಲಾಯಿತು. ಈ ವೇಳೆ 20 ಮಂದಿ ಸಾವನ್ನಪ್ಪಿದ್ದರು. ನಾಜಿಗಳೊಂದಿಗಿನ ಈ ಥರದ ಕಾಂಗ್ರೆಸ್ನ ರೊಮ್ಯಾಂಟಿಸಿಸಂ ಇಂದಿರಾ ಗಾಂಧಿ ಆಡಳಿತಾವಧಿಗೇ ಕೊನೆಯಾಗಿರಬೇಕು ಎಂದು ಬಿಜೆಪಿಯು ಕಾಂಗ್ರೆಸ್ನ ಕಾಲೆಳೆದಿದೆ.
ಜೊತೆಗೆ ಭಾನುವಾರ ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಅವರು ಟ್ವಿಟ್ಟರ್‌ನಲ್ಲಿ ತಾವು ಬರೆದ ಲೇಖನವೊಂದನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ನಾಜಿಗಳು ಯಹೂದಿಗಳ ವಿರುದ್ಧ ಭೀಕರವಾಗಿ ಬುಲ್ಡೋಜರ್ ದಾಳಿ ನಡೆಸಿದ್ದಾರೆ. ನಂತರ ಯಹೂದಿಗಳು ಅದನ್ನು ಪ್ಯಾಲೆಸ್ಟೀನಿಯನ್ನರ ವಿರುದ್ಧ ಬಳಸಿದರು. ಈಗ ಭಾರತ ತನ್ನದೇ ಆದ ಅಲ್ಪಸಂಖ್ಯಾತರ ವಿರುದ್ಧ ಬಳಸುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ.
ಇದನ್ನೂ ಓದಿ: ಅಧಿಕಾರಕ್ಕಾಗಿ ಆಪರೇಷನ್ ಕಮಲ ಅನಿವಾರ್ಯವಾಗಿತ್ತು: ಕಟೀಲ್