ನವದೆಹಲಿ: ಟ್ವಿಟರ್‌ಗೆ ಸರಿಯಾದ ತಿರುಗೇಟು ನೀಡಲು ಐಟಿ ಸಚಿವಾಲಯವು "ಕೂ" ಎಂಬ ಸ್ವದೇಶಿ ಟ್ವಿಟರ್ ತರಹದ ಪ್ಲಾಟ್ಫಾರ್ಮ್ಗೆ ಬರುವಂತೆ ಜನತೆಗೆ ಕರೆ ನೀಡಿದೆ. ಇದಾದ ಬಳಿಕ ಬುಧವಾರ ಟ್ವಿಟರ್ ಮತ್ತು ಭಾರತ ಸರ್ಕಾರದ ನಡುವಿನ ಯುದ್ಧ ತೀವ್ರಗೊಂಡಿದೆ.
ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ವೇಳೆ ನಿಯಮ ಮೀರಿ ಪ್ರಚೋದನಕಾರಿ ಟ್ವೀಟ್ ಮಾಡಿದ್ದ, ಸುಮಾರು 500 ಟ್ವೀಟ್ ಖಾತೆಗಳನ್ನು ನಿಷೇಧ ಮಾಡುವಂತೆ ಕೇಂದ್ರ ಸರ್ಕಾರ ಈ ದೇಶದ ಕಾನೂನಿನ ಪ್ರಕಾರ ನಿರ್ದೇಶನ ಮಾಡಿತ್ತು. ಆದರೆ ಇದರ ಬಗ್ಗೆ ಟ್ವಿಟರ್ ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿತ್ತು. ಇದಕ್ಕೆ ಭಾರತ ಸರ್ಕಾರ ತನ್ನ ಸ್ವದೇಶಿ ಸೋಶಿಯಲ್ ಮೀಡಿಯಾ ಆಪ್ 'ಕೂ' ಮೂಲಕ ಟಕ್ಕರ್ ನೀಡಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಸಚಿವರು 'ಕೂ' ಆಪ್‌ನಲ್ಲಿ ಖಾತೆ ತೆರೆಯುವ ಮೂಲಕ ಅದರತ್ತ ಜನರನ್ನು ಸೆಳೆಯುವ ಪ್ರಯತ್ನ ಆರಂಭಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಟ್ವಿಟರ್ ಕೆಲವು ನಿಯಮಗಳ ಪ್ರಕಾರ ಶಾಶ್ವತ ಅಮಾನತು ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಐಟಿ ಸಚಿವಾಲಯವು ಕೈಗೊಳ್ಳಲು ನಿರ್ದೇಶಿಸಿರುವ ಕ್ರಮಗಳು ಭಾರತೀಯ ಕಾನೂನಿಗೆ ಅನುಗುಣವಾಗಿರುತ್ತವೆ ಎಂದು ನಾವು ನಂಬುವುದಿಲ್ಲ ಎಂದು ಕಂಪನಿ ಹೇಳಿದೆ.
ಓದಿ: ಸ್ವದೇಶಿ 'ಕೂ' ಆ್ಯಪ್ ಬಳಕೆಗೆ ಮುಂದಾದ ಸರ್ಕಾರಿ ಇಲಾಖೆಗಳು
ಕಳೆದ 10 ದಿನಗಳ ಅವಧಿಯಲ್ಲಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಟ್ವಿಟರ್‌ಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹಲವಾರು ನಿರ್ಬಂಧಿಸುವ ಆದೇಶಗಳನ್ನು ನೀಡಿದೆ.
ಇವುಗಳಲ್ಲಿ ಎರಡು ತುರ್ತು ನಿರ್ಬಂಧಿಸುವ ಆದೇಶಗಳಾಗಿವೆ ಎಂದು ಟ್ವಿಟರ್ ಹೇಳಿದೆ. ನಾವು ತಾತ್ಕಾಲಿಕವಾಗಿ ಈ ನಿಯಮಗಳನ್ನು ಪಾಲಿಸಿದ್ದೇವೆ. ಆದರೆ ತರುವಾಯ ನಾವು ಈ ಖಾತೆಗಳನ್ನು ಮತ್ತೆ ತೆರೆಯಲು ಅನುಮತಿಸುತ್ತೇವೆ ಎಂದು ಟ್ವಿಟರ್ ಹೇಳಿದೆ.
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ನಮ್ಮ ತತ್ವಗಳಿಗೆ ಅನುಗುಣವಾಗಿ, "ಸುದ್ದಿ ಮಾಧ್ಯಮ ಘಟಕಗಳು, ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳನ್ನು ಒಳಗೊಂಡಿರುವ ಖಾತೆಗಳ ಮೇಲೆ ನಾವು ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಟ್ವಿಟರ್ ಹೇಳಿದೆ.
'ಕೂ' ವೇದಿಕೆಯು ಸುಮಾರು 10 ತಿಂಗಳಷ್ಟು ಹಳತು. 'ಇದು ಭಾರತೀಯರ ಧ್ವನಿಗಳನ್ನು ಅನುರಣಿಸುತ್ತದೆ' ಎಂಬ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಕಳೆದ ವರ್ಷ ಆತ್ಮನಿರ್ಭರ್ ಭಾರತ್ ಆಪ್ ಆವಿಷ್ಕಾರ ಚಾಲೆಂಜ್‌ನ ಭಾಗವಾಗಿ ಈ ಆಪ್ ಅಭಿವೃದ್ಧಿಯಾಗಿದೆ. ಸಾಮಾಜಿಕ ವರ್ಗದ ವಿಭಾಗದಲ್ಲಿ ಅದು ಎರಡನೆಯ ಬಹುಮಾನ ಪಡೆದಿತ್ತು.