ಪುರುಲಿಯಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣ ರಂಗೇರಿದ್ದು, ಚುನಾವಣಾ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಇಳಿದಿದ್ದಾರೆ. ಹೀಗಾಗಿ ಕದನ ಕಣ ಮತ್ತಷ್ಟು ರಂಗು ಪಡೆದುಕೊಂಡಿದೆ. ಪುರುಲಿಯಾದಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ತೃಣಮೂಲ ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಮಮತಾ ಬ್ಯಾನರ್ಜಿ 'ಖೇಲಾ ಹೊಬೆ'(ಆಟ ಶುರು) ಅಂತಾ ಹೇಳ್ತಿದ್ದು, ಬಿಜೆಪಿ 'ವಿಕಾಸ್ ಹೊಬೆ'(ಅಭಿವೃದ್ಧಿ ಶುಗು) ಎಂದು ಹೇಳ್ತಿದೆ. ದಲಿತರು, ಹಿಂದುಳಿದ ಮತ್ತು ಆದಿವಾಸಿಗಳ ಬಗ್ಗೆ ಟಿಎಂಸಿ ಎಂದಿಗೂ ಮಾತನಾಡಿಲ್ಲ. ಅವರನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಪಶ್ಚಿಮ ಬಂಗಾಳದಲ್ಲಿ ಅಕ್ರಮ ನುಸುಳುವಿಕೆ ನಡೆಯುತ್ತಿದೆ. ಇದರ ಹಿಂದೆ ವೋಟ್ ಬ್ಯಾಂಕ್ ರಾಜಕಾರಣ ಇದೆ ಎಂದು ಅವರು ವಾಗ್ದಾಳಿ ನಡೆಸಿದರು.
ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದಲಿತರು, ಆದಿವಾಸಿಗಳು ಹಾಗೂ ಹಿಂದುಳಿದ ಸಮುದಾಯಕ್ಕೆ ಉದ್ಯೋಗ ಕಲ್ಪಿಸಲಾಗುವುದು. ಜತೆಗೆ ಆಸ್ಪತ್ರೆಗಳು ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ನಿರ್ವಹಿಸಲಿವೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ಆಡಳಿತ ನಡೆಸಿರುವ ಎಡಪಕ್ಷಗಳು ಹಾಗೂ ತೃಣಮೂಲ ಕಾಂಗ್ರೆಸ್ ಅಭಿವೃದ್ಧಿ ಕೆಲಸ ಮಾಡುವ ಬದಲು ಭ್ರಷ್ಟಾಚಾರದಲ್ಲಿ ತೊಡಗಿದೆ. ರಾಜ್ಯದ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದರೂ, ನೀರಾವರಿ ಯೋಜನೆ ಕೈಗೊಂಡಿಲ್ಲ. ರೈತರ ಬಗ್ಗೆ ಕಾಳಜಿ ವಹಿಸುವ ಬದಲು ತನ್ನ ಆಟದಲ್ಲಿ ಬ್ಯುಸಿಯಾಗಿದೆ ಎಂದ ಪ್ರಧಾನಿ ದೂರಿದರು.ಪಶ್ಚಿಮ ಬಂಗಾಳ ಭಗವಾನ್ ರಾಮ್ ಮತ್ತು ಸೀತಾ ದೇವಿಯ ವನವಾಸಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಸೀತಾ ಕುಂಡ್ ಇದೆ. ಸೀತಾ ದೇವಿಗೆ ಬಾಯಾರಿಕೆಯಾಗಿದ್ದ ಸಂದರ್ಭದಲ್ಲಿ ಶ್ರೀರಾಮ ಬಾಣ ಹೊಡೆದು ನೀರು ಹೊರತೆಗೆದಿದ್ದು ಎಂದು ಹೇಳಲಾಗುತ್ತದೆ. ಆದರೆ ಇದೀಗ ಇಲ್ಲಿನ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಸೋಲಿನ ಭೀತಿ ಶುರುವಾಗಿದ್ದು, ಅವರು ಹತಾಶೆ ಹೊರಹಾಕುತ್ತಿದ್ದಾರೆ. ಕಳೆದ 10 ವರ್ಷಗಳ ಅಧಿಕಾರದ ದುರುಪಯೋಗಕ್ಕೆ ಭಾರಿ ಬೆಲೆ ತೆರಲಿದ್ದಾರೆ ಎಂದು ನಮೋ ಎಚ್ಚರಿಸಿದರು.