ನವದೆಹಲಿ: ಲಿಂಗ- ಸಮಾನತೆ ಉದ್ದೇಶದಿಂದ ದೇಶದ ಬೃಹತ್ ಐಟಿ ಕಂಪನಿಗಳಾಗಿರುವ ಟಾಟಾ, ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಹಾಗೂ ಹೆಚ್ಸಿಎಲ್ ಸೇರಿ ಅನೇಕ ದಿಗ್ಗಜ ಕಂಪನಿಗಳು ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿವೆ ಎಂದು ತಿಳಿದು ಬಂದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಸುಮಾರು 60 ಸಾವಿರ ಮಹಿಳೆಯರಿಗೆ ನೇಮಕ ಮಾಡಿಕೊಳ್ಳಲು ಮುಂದಾಗಿವೆ ಎನ್ನಲಾಗಿದೆ.
ಇದೇ ವರ್ಷ ಎಲ್ಲ ಕಂಪನಿಗಳು ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದ್ದು, HCL ಶೇ. 60ರಷ್ಟು ಮಹಿಳೆಯರನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿವೆ. ಇದರ ಜೊತೆಗೆ ವಿಪ್ರೋ ಹಾಗೂ ಇನ್ಫೋಸಿಸ್ ಕೂಡ ಈ ಯೋಜನೆಗೆ ಮುಂದಾಗಿವೆ ಎಂದು ವರದಿಯಾಗಿದೆ. TCL ಇದೇ ವರ್ಷ ಹೊಸದಾಗಿ ಸುಮಾರು 22 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದ್ದು, ಇದರಲ್ಲಿ 50:50 ಆದ್ಯತೆ ನೀಡಲಾಗುವುದು ಎಂದಿದೆ.
ಇದೇ ವಿಚಾರವಾಗಿ ಮಾತನಾಡಿರುವ ಇನ್ಪೋಸಿಸ್ HR ಮುಖ್ಯಸ್ಥ ರಿಚರ್ಡ್ ಲೊಬೊ, ಕಂಪನಿಯಲ್ಲಿ ಯುವಕರು ಹಾಗೂ ಮಹಿಳೆಯರನ್ನು ಸಮಾನವಾಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, 2030ರ ವೇಳೆಗೆ ಶೇ. 45ರಷ್ಟು ಯುವತಿಯರನ್ನು ನೇಮಕ ಮಾಡಿಕೊಳ್ಳುವ ಇರಾದೆ ಇಟ್ಟುಕೊಳ್ಳಲಾಗಿದೆ ಎಂದಿದ್ದಾರೆ. 2022ರ ವೇಳೆಗೆ ಪದವಿ ಮುಗಿಸಿರುವ 35,000ರಷ್ಟು ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳಲಾಗುವುದು ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿರಿ: ಕೋವಿಡ್ನಿಂದ ಪೋಷಕರ ಕಳೆದುಕೊಂಡ ವಿದ್ಯಾರ್ಥಿನಿ: CBSEಯಲ್ಲಿ ಗಳಿಸಿದ್ದು ಶೇ.99.8!
TCS ಕೂಡ 15,000-18,000 ಮಹಿಳಾ ಉದ್ಯೋಗಿಗಳಿಗೆ ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದ್ದು, 2021-22ರ ವೇಳೆಗೆ 40,000 ಹೊಸ ಉದ್ಯೋಗಿಗಳಿಗೆ ಕೆಲಸ ನೀಡಲಿದೆ. ಸದ್ಯ ಕಂಪನಿಯಲ್ಲಿ 185,000 ಮಹಿಳಾ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ವಿಪ್ರೋ ಕೂಡ 12,000 ಉದ್ಯೋಗಿಗಳಿಗೆ ನೇಮಕ ಮಾಡಿಕೊಳ್ಳಲಿದ್ದು, ಈಗಾಗಲೇ 2,000 ಉದ್ಯೋಗಿಗಳು ಕಂಪನಿ ಸೇರಿದ್ದಾರೆ ಎಂದು ತಿಳಿಸಿದ್ದು, ಕೆಲ ದಿನಗಳಲ್ಲಿ ಹೊಸದಾಗ 6 ಸಾವಿರ ಉದ್ಯೋಗಿಗಳು ಸೇರ್ಪಡೆಯಾಗಲಿದ್ದಾರೆ.