ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಭೂಮಿ ಪರಿವೀಕ್ಷಣಾ ಉಪಗ್ರಹ ಉಡಾವಣೆ (GISAT-1)ಯಲ್ಲಿ ಹಿನ್ನಡೆಯಾಗಿದೆ. ರಾಕೆಟ್‌ನ ಕ್ರಯೋಜೆನಿಕ್ ಹಂತದಲ್ಲಿ ಕಾರ್ಯಕ್ಷಮತೆಯ ವೈಪರೀತ್ಯದಿಂದಾಗಿ ಈ ಕಾರ್ಯಾಚರಣೆಯನ್ನು ಪೂರ್ಣವಾಗಿ ಸಾಧಿಸಲಾಗಲಿಲ್ಲ ಎಂದು ಇಸ್ರೋ ತಿಳಿಸಿದೆ.
51.70 ಮೀಟರ್ ಎತ್ತರದ ರಾಕೆಟ್ ಜಿಎಸ್‌ಎಲ್‌ವಿ-ಎಫ್ 10/ಇಒಎಸ್ -03 ಅನ್ನು, ಬೆಳಗ್ಗೆ 05.43ಕ್ಕೆ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಲಾಂಚ್ ಪ್ಯಾಡ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಮೊದಲ ಮತ್ತು ಎರಡನೇ ಹಂತಗಳಲ್ಲಿ ರಾಕೆಟ್‌ನ ಕಾರ್ಯಕ್ಷಮತೆ ಸಾಮಾನ್ಯವಾಗಿದೆ ಎಂದು ಮಿಷನ್ ನಿಯಂತ್ರಣ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದರು.
ಬಳಿಕ, ರಾಕೆಟ್‌ನ ಕಾರ್ಯಕ್ಷಮತೆಯ ವೈಪರೀತ್ಯದಿಂದಾಗಿ ಮಿಷನ್ ಅನ್ನು ಸಂಪೂರ್ಣವಾಗಿ ಸಾಧಿಸಲಾಗಲಿಲ್ಲ. ಕ್ರಯೋಜೆನಿಕ್ ಹಂತದಲ್ಲಿ ಕಾರ್ಯಕ್ಷಮತೆಯ ಅಸಮರ್ಪಕತೆ ಗಮನಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.
ಭೂಮಿಯ ಪ್ರಮುಖ ಪ್ರದೇಶಗಳ ನೈಜ-ಸಮಯದ ಚಿತ್ರಣವನ್ನು ರವಾನಿಸುವುದು, ಕೃಷಿ, ಅರಣ್ಯ, ಜಲಮೂಲಗಳು ಹಾಗೂ ವಿಪತ್ತು ಎಚ್ಚರಿಕೆ, ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪಗಳ ಅವಲೋಕನಕ್ಕೆ ನೆರವಾಗುವುದು ಈ ಉಪಗ್ರಹ ಉಡಾವಣೆಯ ಉದ್ದೇಶವಾಗಿತ್ತು. ಇದು ಜಿಎಸ್‌ಎಲ್‌ವಿ ಹದಿನಾಲ್ಕನೆಯ ಹಾರಾಟವಾಗಿತ್ತು.
ಇಂದಿನ ಉಡಾವಣೆಗೂ ಮುನ್ನ, ಇಸ್ರೋ ಈ ವರ್ಷದ ಫೆಬ್ರವರಿಯಲ್ಲಿ ಬ್ರೆಜಿಲ್‌ನ ಭೂಮಿಯ ಪರಿವೀಕ್ಷಣೆ ಉಪಗ್ರಹ ಅಮೆಜೋನಿಯಾ -1 ಮತ್ತು 18 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.