ತಿರುವನಂತಪುರಂ (ಕೇರಳ): ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ 1994ರ ಇಸ್ರೋ ಗೂಢಚರ್ಯೆ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳ ವಿರುದ್ಧ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಆಗಸ್ಟ್ 27 ರಂದು ಕೇರಳದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.
ಇಸ್ರೋ ಗೂಢಚರ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಎಸ್. ವಿಜಯನ್ ಅವರು ಮಾಜಿ ಸಿಬಿಐ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಸಾಕ್ಷ್ಯ ನಾಶಗೊಳಿಸಲು ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಅವರು ಸಿಬಿಐ ತನಿಖಾಧಿಕಾರಿಗಳಿಗೆ ಭೂಮಿಯನ್ನು ಲಂಚವಾಗಿ ನೀಡಿದ್ದರು ಎಂದು ವಿಜಯನ್ ಆರೋಪಿಸಿದ್ದರು. ಅಲ್ಲದೇ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಕೋರ್ಟ್ಗೆ ನೀಡಿದ್ದರು.
ದಾಖಲೆಗಳನ್ನು ಪರಿಶೀಲಿಸಿ, ಅರ್ಜಿಯ ವಿಚಾರಣೆಯನ್ನು ತಿರುವನಂತಪುರಂನ ಸಿಬಿಐ ವಿಶೇಷ ನ್ಯಾಯಾಲಯ ನಡೆಸಿದ್ದು, ಆಗಸ್ಟ್ 27 ರಂದು ತೀರ್ಪು ಪ್ರಕಟಿಸುವುದಾಗಿ ನ್ಯಾ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಏನಿದು ಇಸ್ರೋ ಗೂಢಚರ್ಯೆ ಪ್ರಕರಣ?
1994 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಯಾಗಿದ್ದ ನಂಬಿ ನಾರಾಯಣನ್ ವಿರುದ್ಧ ಮಾಲ್ಡೀವ್ಸ್ನ ಗುಪ್ತಚರ ಅಧಿಕಾರಿಗಳಿಗೆ ಪ್ರಮುಖ ರಕ್ಷಣಾ ರಹಸ್ಯಗಳನ್ನು ಸೋರಿಕೆ ಮಾಡಿದ ಆರೋಪ ಕೇಳಿ ಬಂದಿತ್ತು. ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದ ಹಿರಿಯ ವಿಜ್ಞಾನಿ ನಂಬಿ ನಾರಾಯಣನ್ ಆ ತಂತ್ರಜ್ಞಾನವನ್ನು ಶತ್ರು ದೇಶಗಳಿಗೆ ಮಾರಾಟ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ನಂಬಿ ನಾರಾಯಣನ್ ಮತ್ತು ಇನ್ನೊಬ್ಬ ವಿಜ್ಞಾನಿ ಶಶಿ ಕುಮಾರ್ ಹಾಗೂ ಇತರ ಸಿಬ್ಬಂದಿಯನ್ನು ಕೇರಳ ಪೊಲೀಸರು ಬಂಧಿಸಿದ್ದರು.
ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಆದರೆ, ನಾರಾಯಣನ್ ಮೇಲಿನ ಆರೋಪ ಸಾಬೀತಾಗದ ಕಾರಣ 1998 ರಲ್ಲಿ ಸುಪ್ರೀಂಕೋರ್ಟ್ ಈ ಪ್ರಕರಣವನ್ನೇ ವಜಾಗೊಳಿಸಿ ತೀರ್ಪು ನೀಡಿತು. ನಂಬಿ ಅವರ ವೃತ್ತಿ ಜೀವನ ಹಾಳು ಮಾಡಿದ್ದಕ್ಕಾಗಿ ಕೋರ್ಟ್ ಆದೇಶದ ಮೇರೆಗೆ 1.3 ಕೋಟಿ ರೂ. ಪರಿಹಾರವನ್ನು ಕೇರಳ ಸರ್ಕಾರ ನೀಡಿತ್ತು.
ಆದರೆ, ಈ ಪ್ರಕರಣದ ಆರೋಪ ಹೊತ್ತಿದ್ದ ವಂಚಿಯೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವಿಜಯನ್ ಅವರು ಸಿಬಿಐ ಅಧಿಕಾರಿಗಳ ವಿರುದ್ಧ ಅರ್ಜಿ ಸಲ್ಲಿಸಿ ಮತ್ತೆ 27 ವರ್ಷದ ಹಿಂದಿನ ಕೇಸ್ ವಿಚಾರಿಸಲು ಕೋರ್ಟ್ ಮೆಟ್ಟಿಲೇರಿದ್ದರು.