ಹೈದರಾಬಾದ್ (ತೆಲಂಗಾಣ): ಮಾರ್ಗದರ್ಶಿ ಚಿಟ್ ಫಂಡ್‌ನ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಲುಕ್‌ಔಟ್ ಸುತ್ತೋಲೆ (Look-out circular -LOC, ಎಲ್‌ಒಸಿ) ಹೊರಡಿಸಿದ ಬಗ್ಗೆ ಆಂಧ್ರಪ್ರದೇಶದ ಸಿಐಡಿಗೆ ತೆಲಂಗಾಣ ಹೈಕೋರ್ಟ್ ಚಾಟಿ ಬೀಸಿದೆ. ಯಾವುದೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದಂತೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಎಲ್‌ಒಸಿ ಹೇಗೆ ಹೊರಡಿಸಲಾಗಿದೆ ಎಂದು ಸಿಐಡಿಯನ್ನು ಉಚ್ಛ ನ್ಯಾಯಾಲಯ ಪ್ರಶ್ನಿಸಿದೆ. ಲುಕ್‌ಔಟ್ ಸುತ್ತೋಲೆಯು ಕಟ್ಟುನಿಟ್ಟಿನ ಕ್ರಮವಾಗಿದ್ದು, ಇದು ಆಂಧ್ರ ಸಿಐಡಿ ಮಾಡಿದ ನ್ಯಾಯಾಂಗ ನಿಂದನೆ ಅಲ್ಲವೇ ಎಂದೂ ಕೇಳಿದೆ.
ಮಾರ್ಗದರ್ಶಿ ಪ್ರಕರಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಂತೆ ಮಾರ್ಚ್ 21ರಂದು ಸಿಐಡಿಗೆ ನ್ಯಾಯಾಲಯ ಆದೇಶ ನೀಡಿತ್ತು. ಅದನ್ನು ಉಲ್ಲಂಘಿಸಿ ಮಾರ್ಗದರ್ಶಿ ಎಂಡಿ ವಿರುದ್ಧ ಲುಕ್‌ಔಟ್ ಸುತ್ತೋಲೆ ಹೊರಡಿಸಿ, ಕಂಪನಿಯ ಆಸ್ತಿ ಜಪ್ತಿ ಮಾಡಲಾಗಿದೆ. ಮಾರ್ಗದರ್ಶಿ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ ಮತ್ತು ಕಂಪನಿಯ ಎಂಡಿ ಶೈಲಜಾ ಕಿರಣ್ ಅವರು, ನ್ಯಾಯಾಂಗ ನಿಂದನೆ ಆರೋಪದಡಿ ಆಂಧ್ರ ಸಿಐಡಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.
ತೆಲಂಗಾಣ ಹೈಕೋರ್ಟ್ನ ನ್ಯಾಯಮೂರ್ತಿ ಕೆ.ಸುರೇಂದರ್ ಮಂಗಳವಾರ ಇದರ ವಿಚಾರಣೆ ಕೈಗೆತ್ತಿಕೊಂಡರು. ಮಾರ್ಗದರ್ಶಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದಮ್ಮಲಪತಿ ಶ್ರೀನಿವಾಸ್ ಮತ್ತು ವಕೀಲ ವಾಸಿರೆಡ್ಡಿ ವಿಮಲ್ ವರ್ಮಾ, ಆಂಧ್ರ ಸಿಐಡಿ ಕಳೆದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆಗಾಗಿ ಕ್ಷಮೆ ಕೋರಿ ಅಫಿಡವಿಟ್ ಸಲ್ಲಿಸಲು ಸಮಯ ಕೋರಿತ್ತು. ಆದರೆ, ಯಾವುದೇ ಅಫಿಡವಿಟ್ ಸಲ್ಲಿಸಿಲ್ಲ ಎಂದು ನ್ಯಾಯ ಪೀಠದ ಗಮನ ಸೆಳೆದರು.
ಆಗ, ಆಂಧ್ರ ಸಿಐಡಿ ಪರ ವಕೀಲ ಕೈಲಾಸನಾಥ ರೆಡ್ಡಿ, ಆಂಧ್ರ ಸಿಐಡಿ ಲುಕ್‌ಔಟ್ ಸುತ್ತೋಲೆಯನ್ನು ಏಕೆ ಹೊರಡಿಸಬೇಕಾಯಿತು ಎಂದು ವಿವರಿಸಿ ಕೌಂಟರ್ ಸಲ್ಲಿಸಲಾಗಿದೆ ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿಗಳು, ಇದು ಆಂಧ್ರ ಸಿಐಡಿ ಉತ್ತರವಾಗಿದ್ದರೆ, ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸೂಕ್ತ ಆದೇಶ ನೀಡಲಾಗುತ್ತದೆ ಎಂದು ಹೇಳಿದರು.
ಸಿಐಡಿ ಪರ ವಕೀಲರು ತಮ್ಮ ವಾದವನ್ನು ಮುಂದುವರಿಸಿ, ಮಾರ್ಗದರ್ಶಿ ಎಂಡಿ ತಮಗೆ ಯಾವುದೇ ಮಾಹಿತಿ ನೀಡದೇ ವಿದೇಶಕ್ಕೆ ತೆರಳಿದ್ದು, ಹೀಗಾಗಿ ಸಿಐಡಿ ಮುಂಜಾಗ್ರತಾ ಕ್ರಮವಾಗಿ ಎಲ್‌ಒಸಿ ನೀಡಿದೆ ಎಂದರು. ಸಿಐಡಿ ವಾದವನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳು, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಎಲ್‌ಒಸಿ ನೀಡುವುದರಿಂದ ಮುನ್ನೆಚ್ಚರಿಕೆ ಎನ್ನುವುದು ಸರಿಯಾದ ಕಾರಣವಲ್ಲ. ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಎಲ್‌ಒಸಿ ನೀಡಲಾಗಿದೆಯೇ ಅಥವಾ ಇಲ್ಲವೇ ಎಂದು ಸಿಐಡಿ ವಕೀಲರನ್ನು ಪ್ರಶ್ನೆ ಮಾಡಿದರು.
ಮುಂದುವರೆದು, ನ್ಯಾಯಾಂಗ ನಿಂದನೆಯಡಿ ಆದೇಶ ಹೊರಡಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳು ಎಚ್ಚರಿಸಿದಾಗ, ಸಿಐಡಿ ವಕೀಲರು ಎಲ್‌ಒಸಿ ವಿಷಯದಲ್ಲಿ ಅಫಿಡವಿಟ್ ಸಲ್ಲಿಸಲು ಸ್ವಲ್ಪ ಸಮಯಾವಕಾಶ ಕೊಡಿ ಎಂದು ಕೋರಿದರು. ಹೀಗಾಗಿ ನ್ಯಾಯಮೂರ್ತಿಗಳು, ಈ ವಿಷಯವನ್ನು ಆಂಧ್ರ ಸಿಐಡಿ ನಿರ್ಧಾರಕ್ಕೆ ಬಿಡಲಾಗುತ್ತದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 15ರಂದು ಮುಂದೂಡುವುದಾಗಿ ಹೇಳಿದರು.
ಹಿಂದಿನ ವಿಚಾರಣೆಯಲ್ಲಿ ನೀಡಿದ ಆದೇಶದಂತೆ ಆಂಧ್ರ ಸಿಐಡಿ ಹೆಚ್ಚುವರಿ ಡಿಜಿ ಸಂಜಯ್, ಹೆಚ್ಚುವರಿ ಎಸ್ಪಿಗಳಾದ ಎಸ್.ರಾಜಶೇಖರ್ ರಾವ್, ಸಿ.ಎಚ್.ರವಿಕುಮಾರ್ ಮತ್ತು ಆಂಧ್ರ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿ ಹರೀಶ್ ಕುಮಾರ್ ಗುಪ್ತಾ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ಎಲ್ಲ ಅಧಿಕಾರಿಗಳಿಗೆ ಮುಂದಿನ ವಿಚಾರಣೆಗೂ ಹಾಜರಾಗುವಂತೆ ನ್ಯಾಯಮೂರ್ತಿಗಳು ಆದೇಶಿಸಿದರು.
ಇದನ್ನೂ ಓದಿ: ಮಾರ್ಗದರ್ಶಿ ಚಿಟ್ ಫಂಡ್ ಪ್ರಕರಣ: ಆಂಧ್ರ ಹೈಕೋರ್ಟ್ ಮಧ್ಯಂತರ ಆದೇಶದ ವಿರುದ್ಧದ ಎಸ್‌ಎಲ್‌ಪಿ ವಜಾಗೊಳಿಸಿದ ಸುಪ್ರೀಂ ಕೋರ್ಟ್