ಹೈದರಾಬಾದ್: ಜೀವನ ನಿರ್ವಹಣೆಗೆ ಉತ್ತಮ ಆದಾಯ ಹೊಂದಿರುವ ಬಹುತೇಕ ಮಂದಿ ತಮ್ಮಲ್ಲಿರುವ ಹಣವನ್ನು ದುಪ್ಪಟ್ಟು ಮಾಡಲು ಬಯಸುತ್ತಾರೆ. ಆದರೆ ಹಣವನ್ನು ಎಲ್ಲಿ ಹೂಡಿಕೆ ಮಾಡಿದರೆ, ದುಪ್ಪಟ್ಟಾಗುತ್ತದೆ ಎಂಬ ಗೊಂದಲ ಕೂಡಾ ಅವರಲ್ಲಿರುತ್ತದೆ. ಎಲ್ಲರೂ ಲಾಭ ಪಡೆಯಬೇಕೆಂದು ಯೋಚಿಸುತ್ತಾರೆ. ಕೆಲವರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನದ ಮೇಲಿನ ಹೂಡಿಕೆಯಿಂದ ಲಾಭವಿದೆಯೇ? ಎಷ್ಟು ಲಾಭ ಬರುತ್ತದೆ? ಹೇಗೆ ಹೂಡಿಕೆ ಮಾಡಬೇಕು? ಎಲ್ಲಾ ಅನುಮಾನಗಳಿಗೆ ತಜ್ಞರ ಉತ್ತರವೇನು ಎಂಬುದನ್ನು ನೋಡೋಣ..
ವೆಂಕಟೇಶ್ ಎಂಬುವವರ ಪ್ರಶ್ನೆ: ನಾನು ತಿಂಗಳಿಗೆ 10 ಸಾವಿರ ರೂಪಾಯಿಗಿಂತಲೂ ಹೆಚ್ಚು ಹೂಡಿಕೆ ಮಾಡಬೇಕು ಎಂದುಕೊಂಡಿದ್ದೇನೆ. ಯಾವ ಯೋಜನೆಗಳಲ್ಲಿ ವಾರ್ಷಿಕವಾಗಿ ಶೇಕಡಾ 14ಕ್ಕಿಂತ ಹೆಚ್ಚು ಲಾಭ ಬರುತ್ತದೆ? ಎಷ್ಟು ದಿನಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ?
ಉತ್ತರ: ನೀವು ಹೂಡಿಕೆಯಲ್ಲಿ ಎಷ್ಟು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುತ್ತೀರೋ, ಅಷ್ಟೇ ಆದಾಯ ಬರುತ್ತದೆ. ಷೇರು ಆಧಾರಿತ ಹೂಡಿಕೆಯಲ್ಲಿ ಕೆಲವು ಸಂದರ್ಭಗಳಲ್ಲಿ ಲಾಭವು ಶೇಕಡಾ 14ಕ್ಕಿಂತ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲೂ ಕನಿಷ್ಠ 7ರಿಂದ 10 ವರ್ಷಗಳವರೆಗೆ ನೀವು ಹೂಡಿಕೆ ಮಾಡಬೇಕಾಗುತ್ತದೆ. ಅಕಸ್ಮಾತ್ ನಿಮಗೆ ಅಲ್ಪಾವಧಿಯ ಹೂಡಿಕೆ ಬೇಕೆಂದು ಬಯಸಿದರೆ, ಅದರಲ್ಲಿ ಏರಿಳಿತಗಳು ಹೆಚ್ಚಾಗಿರುತ್ತವೆ. ನೀವು ದೀರ್ಘಕಾಲದ ಹೂಡಿಕೆ ಮಾಡುವುದನ್ನು ಮುಂದುವರಿಸಿದರೆ ಶೇಕಡಾ 12ರಿಂದ 15ರಷ್ಟು ಲಾಭವನ್ನು ನಿರೀಕ್ಷೆ ಮಾಡಬಹುದಾಗಿದೆ. ಇದಕ್ಕಾಗಿ ನೀವು ಉತ್ತಮವಾಗಿರುವ ಇಕ್ವಿಟಿ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ರೋಹಿತ್ ಪ್ರಶ್ನೆ : ನಾನು ನನ್ನ ತಾಯಿಯ ಹೆಸರಿನಲ್ಲಿ ಹಿರಿಯ ನಾಗರಿಕರ ಉಳಿತಾಯ ಖಾತೆಯಲ್ಲಿ 5 ಲಕ್ಷ ರೂಪಾಯಿ ಜಮಾ ಮಾಡಬೇಕೆಂದುಕೊಂಡಿದ್ದೇನೆ. ಇದು ಹೆಚ್ಚು ಲಾಭದಾಯಕವಾಗಿದೆಯೇ? ಅಥವಾ ಸಾಲದ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ, ತಿಂಗಳಿಗೆ ಇಂತಿಷ್ಟು ಮೊತ್ತವನ್ನು ತೆಗೆದುಕೊಳ್ಳುವುದು ಉತ್ತಮವೇ?
ಉತ್ತರ: ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಶೇಕಡಾ 7.4ರಷ್ಟು ವಾರ್ಷಿಕ ಬಡ್ಡಿಯನ್ನು ಪಡೆಯಬಹುದು. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ಪಾವತಿಸಲಾಗುತ್ತದೆ. ಈಗಿರುವ ಪರಿಸ್ಥಿತಿಗಳಲ್ಲಿ, ಸ್ಥಿರ ಠೇವಣಿ ಅಥವಾ ಸಾಲ ನಿಧಿಗಳು ಹೆಚ್ಚಿನ ಆದಾಯವನ್ನು ನೀಡುವ ಸಾಧ್ಯತೆ ತುಂಬಾ ಕಡಿಮೆ. ಹಾಗಾಗಿ ಹಣವನ್ನು ಹಿರಿಯ ನಾಗರಿಕರ ಖಾತೆಗೆ ಜಮಾ ಮಾಡಿ. ಯೋಜನೆಯು ಐದು ವರ್ಷಗಳವರೆಗೆ ಮುಂದುವರೆಯಬೇಕು. ಇಂತಹವರ ಖಾತೆಗಳಿಗೆ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ. ಗಳಿಸಿದ ಬಡ್ಡಿಯನ್ನು ಒಟ್ಟು ಆದಾಯದೊಂದಿಗೆ ತೋರಿಸಲಾಗುತ್ತದೆ ನಂತರ ವಿವಿಧ ಸ್ಲ್ಯಾಬ್ಗಳ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ.
ಪ್ರಭಾಕರ್ ಪ್ರಶ್ನೆ: : ನನಗೆ 43 ವರ್ಷ. 75 ಲಕ್ಷ ರೂಪಾಯಿಯ ಟರ್ಮ್ ಪಾಲಿಸಿಯನ್ನು ತೆಗೆದುಕೊಳ್ಳಬೇಕೆಂದಿದ್ದೇನೆ. ಈಗಾಗಲೇ ಒಂದು ಇನ್ಸೂರೆನ್ಸ್ ತೆಗೆದುಕೊಂಡಿರುವ ಕಂಪನಿಯಿಂದಲೇ ಟರ್ಮ್ ಪಾಲಿಸಿಯನ್ನು ತೆಗೆದುಕೊಳ್ಳಬಹುದೇ? ಎರಡು ಬೇರೆ ಬೇರೆ ಕಂಪನಿಗಳಿಂದ ಪಾಲಿಸಿಗಳನ್ನು ತೆಗೆದುಕೊಂಡರೆ ಏನು ಪ್ರಯೋಜನ?
ಉತ್ತರ: ಜೀವ ವಿಮಾ ಪಾಲಿಸಿಯ ಮೌಲ್ಯವು ಯಾವಾಗಲೂ ವಾರ್ಷಿಕ ಆದಾಯದ ಸುಮಾರು 10 ರಿಂದ 12 ಪಟ್ಟು ಇರಬೇಕು ಎಂಬುದನ್ನು ಮೊದಲು ನೆನಪಿನಲ್ಲಿ ಇಟ್ಟುಕೊಳ್ಳಿ. ಒಂದು ವೇಳೆ ನಿಮ್ಮ ಆದಾಯ ತಿಂಗಳಿಗೆ 25 ಸಾವಿರ ರೂಪಾಯಿ ಇದ್ದರೆ, ವರ್ಷಕ್ಕೆ ನಿಮ್ಮ ಆದಾಯ 3 ಲಕ್ಷ ರೂಪಾಯಿ ಆಗಿರುತ್ತದೆ. ಅಂದರೆ ನೀವು ಸುಮಾರು 36 ಲಕ್ಷ ರೂಪಾಯಿಯ ವಿಮೆ ಮಾಡಿಸಿಕೊಂಡರೆ ಒಳ್ಳೆಯದು. ವಿಮೆ ತೆಗೆದುಕೊಳ್ಳುವ ವೇಳೆ ನಿಮ್ಮ ವೈಯಕ್ತಿಕ ಮಾಹಿತಿ, ಆರೋಗ್ಯ ಮತ್ತು ಹಣಕಾಸಿನ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ. ಒಮ್ಮೊಮ್ಮೆ ವಿಮಾ ಕಂಪನಿ ಕೈಕೊಟ್ಟರೆ, ನಾವು ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಎರಡು ಕಂಪನಿಗಳಲ್ಲಿ ವಿಮೆ ತೆಗೆದುಕೊಂಡರೆ ಒಳ್ಳೆಯದು. ನೀವು ಉತ್ತಮವಾದ ವಿಮಾ ಕಂಪನಿಯನ್ನು ಆಯ್ಕೆ ಮಾಡಿಕೊಂಡರೆ ಉತ್ತಮ.
ನಿಂಗರಾಜು ಪ್ರಶ್ನೆ: ಈಗ ಡಿಜಿಟಲ್ ಚಿನ್ನದ ಹೆಸರಿನಲ್ಲಿ ಹೂಡಿಕೆ ಮಾಡಲು ಹಲವು ಕಂಪನಿಗಳು ಅವಕಾಶ ನೀಡುತ್ತಿವೆ. ಇವುಗಳನ್ನು ಆಯ್ಕೆ ಮಾಡುವುದು ಉತ್ತಮವೇ? ಅಥವಾ ಇಂತಹ ಹೂಡಿಕೆಯಿಂದ ಅಪಾಯವಿದೆಯೇ?
ಉತ್ತರ: ಈಗ ಚಿನ್ನದ ಮೇಲೆ ಹೂಡಿಕೆ ಮಾಡಲು ಹಲವು ಮಾರ್ಗಗಳಿವೆ. ಅದರಲ್ಲಿ ಡಿಜಿಟಲ್ ಗೋಲ್ಡ್ ಕೂಡಾ ಒಂದು. ಕೇವಲ 100 ರೂಪಾಯಿಗೇ ಹೂಡಿಕೆ ಮಾಡುವುದರಿಂದ ಆಕರ್ಷಕವಾಗಿ ಕಾಣುತ್ತದೆ. ಚಿನ್ನದ ಬೆಲೆ ಏರಿಳಿತಗಳನ್ನು ಕಾಣುತ್ತಿರುವ ಕಾರಣದಿಂದ ಚಿನ್ನದ ಬೆಲೆಗೆ ಅನುಗುಣವಾಗಿ ಲಾಭ ಅಥವಾ ನಷ್ಟವಾಗಬಹುದು. ನೀವು ದೀರ್ಘಾವಧಿಯಲ್ಲಿ ಹೂಡಿಕೆ ಮಾಡಲು ಬಯಸಿದಾಗ ಗೋಲ್ಡ್ ಇಟಿಎಫ್ (Exchange-traded Fund) ಅಥವಾ ಗೋಲ್ಡ್ ಫಂಡ್‌ಗಳನ್ನು ಆರಿಸಿಕೊಳ್ಳುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಅಟಲ್ ಪಿಂಚಣಿ ಯೋಜನೆಯ ಚಂದಾದಾರರ ಸಂಖ್ಯೆ ಈಗ 3.68 ಕೋಟಿಗೆ ಏರಿಕೆ!