ನವದೆಹಲಿ : ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ವೆಬ್ಸೈಟ್ನಲ್ಲಿ ಗುರುವಾರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಬಳಕೆದಾರರು ಸುಮಾರು ಎರಡು ಗಂಟೆಗಳ ಕಾಲ ಇ-ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗಲಿಲ್ಲ. ಮಧ್ಯಾಹ್ನ ಈ ಬಗ್ಗೆ ಸ್ವತಃ ಐಆರ್ಸಿಟಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ತಾಂತ್ರಿಕ ಅಡಚಣೆ ಉಂಟಾಗಿರುವುದನ್ನು ಒಪ್ಪಿಕೊಂಡಿದೆ. ಈ ತಾಂತ್ರಿಕ ಅಡಚಣೆ ತಾತ್ಕಾಲಿಕವಾಗಿತ್ತು ಎಂದು ಅದು ಹೇಳಿದೆ.
ತತ್ಕಾಲ್ ಅಥವಾ ಸಾಮಾನ್ಯ ಕೋಟಾದಡಿ ಟಿಕೆಟ್ ಪಡೆಯಲು ಸಾಧ್ಯವಾಗದೇ ಗ್ರಾಹಕರು ಸಾಮಾಜಿಕ ಮಾಧ್ಯಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಐಆರ್ಸಿಟಿಸಿ ವೆಬ್ಸೈಟ್ ಮತ್ತು ಅದರ ಮೊಬೈಲ್ ಅಪ್ಲಿಕೇಶನ್ ಎರಡರಲ್ಲೂ ಲಾಗಿನ್ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಬಹುತೇಕ ಬಳಕೆದಾರರಿಗೆ 502 ಬ್ಯಾಡ್ ಗೇಟ್ ವೇ ದೋಷ ಕಾಣಿಸಿಕೊಂಡಿದೆ.
ವೆಬ್ಸೈಟ್ ಸ್ಥಗಿತಗೊಂಡಿದ್ದಕ್ಕೆ ಹಲವಾರು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. "ಹೇಗಿದ್ದರೂ ರಾತ್ರಿ 11:30 ರಿಂದ 12:30 ರವರೆಗೆ ಮೆಂಟೆನನ್ಸ್ಗಾಗಿ ಸೈಟ್ ಸ್ಥಗಿತವಾಗಿರುತ್ತದೆ. ಆದರೆ ದೈನಂದಿನ ಮೆಂಟೆನನ್ಸ್ ನಂತರವೂ ಹಗಲಿನಲ್ಲಿ ವೆಬ್ಸೈಟ್ ಬಂದ್ ಆಗಿರುವುದು ಕಳವಳಕಾರಿ ವಿಷಯವಾಗಿದೆ." ಎಂದು ಬಳಕೆದಾರರೊಬ್ಬರು ಎಕ್ಸ್ನಲ್ಲಿ ಬರೆದಿದ್ದಾರೆ.
ಐಆರ್ಸಿಟಿಸಿ ವೆಬ್ ಸೈಟ್ ಪ್ರತಿದಿನ ರಾತ್ರಿ 11:45 ರಿಂದ 12:20 ರವರೆಗೆ ನಿರ್ವಹಣೆಗಾಗಿ ಸ್ಥಗಿತಗೊಳ್ಳುತ್ತದೆ. ಈ ಸಮಯದಲ್ಲಿ ಬಳಕೆದಾರರಿಗೆ ಟಿಕೆಟ್ ಕಾಯ್ದಿರಿಸಲು ಅಥವಾ ಪಿಎನ್ಆರ್ ಸ್ಥಿತಿಯನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ.
ಇನ್ನು ತಾಂತ್ರಿಕ ದೋಷದ ಮಧ್ಯೆ ಟಿಕೆಟ್ ಕಾಯ್ದಿರಿಸಲು ಪ್ರಯತ್ನಿಸುತ್ತಿದ್ದ ಅನೇಕ ಪ್ರಯಾಣಿಕರ ಖಾತೆಯಿಂದ ಹಣ ಡೆಬಿಟ್ ಆಗಿದೆ. ಆದರೆ ಅವರ ಖಾತೆಯಲ್ಲಿ ಟಿಕೆಟ್ ಬುಕ್ ಆಗಿರುವುದು ತೋರಿಸುತ್ತಿಲ್ಲ. ನಿರ್ವಹಣೆಯ ಕೆಲಸದಿಂದಾಗಿ ವೆಬ್ಸೈಟ್ ಮತ್ತು ಆಪ್ ನಲ್ಲಿ ದೋಷ ಕಾಣಿಸಿಕೊಂಡಿದ್ದು ಪ್ರಯಾಣಿಕರು ಕೆಲ ಹೊತ್ತಿನ ನಂತರ ಮತ್ತೆ ಪ್ರಯತ್ನಿಸುವಂತೆ ಕೆಲವರಿಗೆ ಐಆರ್ಸಿಟಿಸಿಯಿಂದ ಫ್ಲ್ಯಾಶ್ ಮೆಸೇಜ್ ಬಂದಿದೆ.
ಇನ್ನು ನೀವು ಟಿಕೆಟ್ ರದ್ದುಗೊಳಿಸಲು ಅಥವಾ ಟಿಡಿಆರ್ ಸಲ್ಲಿಸಲು ಬಯಸಿದರೆ, ಗ್ರಾಹಕ ಸೇವಾ ಸಂಖ್ಯೆ 14646, 0755-6610661 ಅಥವಾ 0755-4090600 ಗೆ ಕರೆ ಮಾಡಬಹುದು. ಇಮೇಲ್ ವಿಳಾಸ etickets@irctc.co.in ಗೆ ಮೇಲ್ ಮಾಡಬಹುದು.
ಐಆರ್ಸಿಟಿಸಿ ಇದು ಭಾರತೀಯ ರೈಲ್ವೆ ಕ್ಯಾಟರಿಂಗ್, ಆನ್ಲೈನ್ ಟಿಕೆಟಿಂಗ್ ಮತ್ತು ಪ್ರವಾಸೋದ್ಯಮ ಕಾರ್ಯಾಚರಣೆಗಳನ್ನು ನಿರ್ವಹಿಸಲು ರೈಲ್ವೆ ಸಚಿವಾಲಯ ಸ್ಥಾಪಿಸಿದ ಭಾರತೀಯ ರೈಲ್ವೆಯ ಅಂಗಸಂಸ್ಥೆಯಾಗಿದೆ. ಇದು ಲಕ್ಷಾಂತರ ಪ್ರಯಾಣಿಕರಿಗೆ ರೈಲು ಪ್ರಯಾಣವನ್ನು ಹೆಚ್ಚು ಆರಾಮದಾಯಕ ಮತ್ತು ಅನುಕೂಲಕರವಾಗಿಸಿದೆ.
ಇದನ್ನೂ ಓದಿ : ಯೂಟ್ಯೂಬ್ ವೀಡಿಯೊಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲಿದೆ ಗೂಗಲ್ 'ಬಾರ್ಡ್'