ಚೆನ್ನೈ: ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ವಿಮೆ ಸೌಲಭ್ಯ ಸಿಗದೇ ಸಂಕಷ್ಟಕ್ಕೀಡಾಗಿದ್ದರು. ಇದನ್ನು ತಪ್ಪಿಸಲು ರೈಲ್ವೆ ಇಲಾಖೆ ಇನ್ನು ಮುಂದೆ ಟಿಕೆಟ್ ಬುಕ್ಕಿಂಗ್ ವೇಳೆ ಸ್ವಯಂಚಾಲಿತವಾಗಿ 10 ಲಕ್ಷ ರೂಪಾಯಿ ವಿಮೆ ಪಾಲಿಸಿ ಯೋಜನೆಯನ್ನು ಪರಿಚಯಿಸಿದೆ. ಒಂದು ವೇಳೆ ವಿಮೆ ಬೇಡವೆಂದಾದಲ್ಲಿ ಸೂಕ್ತ ಆಯ್ಕೆಯ ಮೂಲಕ ಕೈಬಿಡುವ ಅವಕಾಶವನ್ನೂ ನೀಡಿದೆ.
ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಪೋರ್ಟಲ್‌ನಲ್ಲಿ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವ ಪ್ರಯಾಣಿಕರಿಗೆ ಈಗ ಸ್ವಯಂಚಾಲಿತವಾಗಿ 10 ಲಕ್ಷ ರೂಪಾಯಿಗಳಿಗೆ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ. ವಿಶೇಷವೆಂದರೆ, ಈ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಗೆ ವಿಧಿಸಲಾದ ಪ್ರೀಮಿಯಂ ಅತ್ಯಲ್ಪ ಅಂದರೆ, 35 ಪೈಸೆಯಷ್ಟಿದೆ. ಪ್ರಯಾಣದ ಸಮಯದಲ್ಲಿ ರೈಲು ಅಪಘಾತದಿಂದ ಸಾವು, ಅಂಗವೈಕಲ್ಯ ಉಂಟಾದರೆ ವೈದ್ಯಕೀಯ ವೆಚ್ಚಗಳನ್ನೂ ಪಾಲಿಸಿ ಒಳಗೊಂಡಿದೆ.
ಬೇಕು, ಬೇಡ ಎರಡು ಆಯ್ಕೆ: ರೈಲ್ವೆ ಇಲಾಖೆ ಪರಿಚಯಿಸಿದ ವಿಮಾ ರಕ್ಷಣೆಯನ್ನು ವಿಮಾ ಕಂಪನಿಗಳಾದ ಎಸ್‌ಬಿಐ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಲಿಬರ್ಟಿ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ನೀಡುತ್ತಿವೆ. 10 ಲಕ್ಷ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪ್ರಯಾಣಿಕರು ಈಗ ಸ್ವಯಂಚಾಲಿತವಾಗಿ ಪಡೆಯಲಿದ್ದಾರೆ. ಇದನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಕೈಬಿಡುವ ಅವಕಾಶವೂ ಇದರಲ್ಲಿದೆ. ವಿಮಾ ರಕ್ಷಣೆ ಬಯಸದವರು ಸೂಚಿತ ಆಯ್ಕೆ ಕ್ಲಿಕ್ ಮಾಡುವ ಮೂಲಕ ಯೋಜನೆಯಿಂದ ಹೊರಗುಳಿಯಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳು ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತದಲ್ಲಿ 288 ಪ್ರಯಾಣಿಕರು ಸಾವನ್ನಪ್ಪಿ, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದರಲ್ಲಿ IRCTC ಪ್ರಯಾಣ ಅಪಘಾತ ವಿಮಾ ಯೋಜನೆಯಡಿಯಲ್ಲಿ 624 ಪ್ರಯಾಣಿಕರು ಮಾತ್ರ ವಿಮಾ ರಕ್ಷಣೆಯನ್ನು ಆಯ್ದುಕೊಂಡಿದ್ದರು. ಅಪಘಾತದದಲ್ಲಿ ಅಂಗವೈಕಲ್ಯ ಮತ್ತು ಆಸ್ಪತ್ರೆಗೆ ದಾಖಲಾದ ವಿಮಾದಾರರಿಗೆ ಒಟ್ಟು 60.52 ಲಕ್ಷ ರೂ.ಗಳ ಒಟ್ಟು 22 ಕ್ಲೈಮ್‌ಗಳನ್ನು ನೀಡಲಾಗಿದೆ. ಇದರಲ್ಲಿ ಯಾವುದೇ ಸಾವಿಗೆ ಕ್ಲೈಮ್ ನೀಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾ ಕಂಪನಿಯಾದ ಲಿಬರ್ಟಿ ಜನರಲ್ ಇನ್ಶೂರೆನ್ಸ್‌ಗೆ ಐದು ಕ್ಲೈಮ್‌ಗಳನ್ನು ಸಲ್ಲಿಸಲಾಗಿದೆ. ಅದರಲ್ಲಿ ಕಂಪನಿಯು 17,800 ವೈದ್ಯಕೀಯ ವೆಚ್ಚಗಳಿಗಾಗಿ 2 ಕ್ಲೈಮ್‌ಗಳನ್ನು ಇತ್ಯರ್ಥಗೊಳಿಸಿದೆ. 6 ಲಕ್ಷ ರೂಪಾಯಿಯ ಮೂರು ಕ್ಲೈಮ್‌ಗಳು ಇನ್ನೂ ಬಾಕಿ ಉಳಿಸಿಕೊಂಡಿದೆ. ಎಸ್‌ಬಿಐ ಜನರಲ್ ಇನ್ಶೂರೆನ್ಸ್ ಕಂಪನಿಗೆ ಒಟ್ಟು 50.52 ಲಕ್ಷ ರೂಪಾಯಿಗಾಗಿ 17 ಕ್ಲೈಮ್ ಸಲ್ಲಿಸಲಾಗಿದೆ. ವಿಮಾದಾರರು ಇದರಲ್ಲಿ 2.25 ಲಕ್ಷ ರೂಪಾಯಿಯ 2 ಕ್ಲೈಮ್‌ಗಳನ್ನು ಪೂರ್ಣಗೊಳಿಸಿದ್ದಾರೆ.
ಪ್ರೀಮಿಯಂ ಮೊತ್ತ ಕಡಿಮೆ: ರೈಲು ಪ್ರಯಾಣದ ವೇಳೆ ಎಲ್ಲ ಪ್ರಯಾಣಿಕರಿಗೆ ವಿಮಾ ಪಾಲಿಸಿ ನೀಡುವುದರಿಂದ ಅದರ ಪ್ರೀಮಿಯಂ ಮೊತ್ತ ಕಡಿಮೆಯಾಗಲಿದೆ. IRCTC ಪೋರ್ಟಲ್ ಮೂಲಕ ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡಿದಲ್ಲಿ ಎರಡು ವಿಮಾ ಕಂಪನಿಗಳು ಸಮಾನ ಸಂಖ್ಯೆಯ ಪಾಲಿಸಿಗಳನ್ನು ಪಡೆಯುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2016 ರಲ್ಲಿ ಈ ವಿಮಾ ಯೋಜನೆಯನ್ನು ಪ್ರಾರಂಭಿಸಿದಾಗ, ಶ್ರೀರಾಮ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ರಾಯಲ್ ಸುಂದರಂ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಪ್ರತಿ ಪ್ರಯಾಣಿಕರಿಗೆ 0.92 ಪೈಸೆ ಪ್ರೀಮಿಯಂ ನಿಗದಿ ಮಾಡಿತ್ತು.