ಪಣಜಿ (ಗೋವಾ): ದೃಢನಿಶ್ಚಯ ಮತ್ತು ಸಾಹಸಕ್ಕೆ ಮಾದರಿ ಎಂಬಂತೆ ಗೋವಾದ ಐಪಿಎಸ್ ಅಧಿಕಾರಿಯೊಬ್ಬರು ಕ್ಯಾನ್ಸರ್ ರೋಗವನ್ನು ಹಿಮ್ಮೆಟ್ಟಿಸಿದ್ದು, ಪುರುಷರ ಐರನ್‌ಮ್ಯಾನ್ ಟ್ರಯಥ್ಲಾನ್ ರೇಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಅಪರಾಧ ಪತ್ತೆ ದಳದ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ನಿಧಿನ್ ವಲ್ಸನ್ ಅವರು ಗೋವಾದಲ್ಲಿ ಪ್ರಮುಖ ಭೂಕಬಳಿಕೆ ಪ್ರಕರಣಗಳ ತನಿಖೆಯನ್ನು ನಿರ್ವಹಿಸುತ್ತಿದ್ದಾರೆ.
ಇವರು ಟ್ರಯಥ್ಲಾನ್ ರೇಸ್ನಲ್ಲಿ ಭಾಗವಹಿಸಿ ರೇಸ್ ಗೆಲ್ಲಲಿಲ್ಲ. ಆದರೆ ತಮ್ಮ ದೃಢನಿಶ್ಚಯ ಮತ್ತು ಇಚ್ಛಾಶಕ್ತಿಯ ಪ್ರದರ್ಶನದಿಂದ ಪ್ರೇಕ್ಷಕರ ಹೃದಯ ಗೆದ್ದಿದ್ದು ಮಾತ್ರ ನಿಜ. ಪಣಜಿಯಲ್ಲಿ ಭಾನುವಾರ ನಡೆದ ಐರನ್‌ಮ್ಯಾನ್ 70.3 ಓಟದ ನಂತರ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಲ್ಸನ್, ನನಗಿದು ಸಾಧ್ಯವಾದರೆ ನಾನು ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸಲು ಸಾಧ್ಯವಾಗುತ್ತದೆ.
ಐರನ್‌ಮ್ಯಾನ್ 70.3 ಓಟ: ಕ್ಯಾನ್ಸರ್ ಎಂಬುದು ಹೋರಾಡಿ ಸೋಲಿಸಲಾಗದ ಕಾಯಿಲೆಯಲ್ಲ ಎಂದು ಎಲ್ಲರಿಗೂ ತೋರಿಸುತ್ತೇನೆ ಎಂದು ಹೇಳಿದರು. ಐರನ್‌ಮ್ಯಾನ್ 70.3 ಓಟದಲ್ಲಿ 1,400 ಕ್ಕೂ ಹೆಚ್ಚು ಜನ ಭಾಗವಹಿಸಿದ್ದು ಗಮನಾರ್ಹ. ಐಪಿಎಸ್ ಅಧಿಕಾರಿ ವಲ್ಸನ್ ನಿಗದಿತ ಸಮಯದೊಳಗೆ ಅಂದರೆ 8 ಗಂಟೆ, 3 ನಿಮಿಷ ಮತ್ತು 53 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿದರು ಎಂದು ಸಂಘಟಕರು ತಿಳಿಸಿದ್ದಾರೆ.
ತಾನು ಈ ಹಿಂದೆ ನಾನ್-ಹಾಡ್ಜ್ಕಿನ್ಸ್ ಲಿಂಫೋಮಾದಿಂದ ಬಳಲುತ್ತಿದ್ದೆ. ಇದು ಸಾಮಾನ್ಯವಾಗಿ ದುಗ್ಧರಸ ವ್ಯವಸ್ಥೆಯಲ್ಲಿ ಬೆಳೆಯುವ ಕ್ಯಾನ್ಸರ್ ಆಗಿದೆ ಎಂದು ವಲ್ಸನ್ ತಿಳಿಸಿದರು. ಕ್ಯಾನ್ಸರ್ಗೆ ತುತ್ತಾಗಿದ್ದ ಪೊಲೀಸ್ ಅಧಿಕಾರಿ ನಿಧಿನ್ ವಲ್ಸನ್ ಕ್ಯಾನ್ಸರ್ ವಿರುದ್ಧದ ಹೋರಾಟದಿಂದ ಯಾವತ್ತೂ ವಿಮುಖರಾಗಲಿಲ್ಲ. ಇದೇ ವರ್ಷದ ಫೆಬ್ರವರಿಯಲ್ಲಿ ಅವರು ಕ್ಯಾನ್ಸರ್ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
ಟ್ರಯಥ್ಲಾನ್‌ನಲ್ಲಿ ಒಟ್ಟು 1,450 ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ 1.9 ಕಿಮೀ ಸಮುದ್ರದಲ್ಲಿ ಈಜು, 90 ಕಿಮೀ ಸೈಕ್ಲಿಂಗ್ ಮತ್ತು 21 ಕಿಮೀ ಓಟ ಸೇರಿವೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆಯ ಹಳೆಯ ವಿದ್ಯಾರ್ಥಿ ನಿಹಾಲ್ ಬೇಗ್ ರೇಸ್ ಗೆದ್ದರೆ, ಭಾರತೀಯ ಸೇನೆಯ ಹಾಲಿ ಚಾಂಪಿಯನ್ ಬಿಸ್ವರ್ಜಿತ್ ಸೈಖೋಮ್ ಎರಡನೇ ಸ್ಥಾನ ಪಡೆದರು ಎಂದು ಸಂಘಟಕರು ಘೋಷಿಸಿದ ಫಲಿತಾಂಶಗಳು ತಿಳಿಸಿವೆ.
ಇದನ್ನೂ ಓದಿ: ಮೈಸೂರಿನ ದಂತ ವೈದ್ಯೆ ಉಷಾ ಈಗ 'ಐರನ್ ವುಮೆನ್'!