ಚೆನ್ನೈ (ತಮಿಳುನಾಡು): ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳ ಹಲ್ಲನ್ನು ಇಕ್ಕಳದಿಂದ ಕಿತ್ತು ಹಾಕಿದ ಆರೋಪದ ಮೇರೆಗೆ ಸಹಾಯಕ ಪೊಲೀಸ್ ಅಧೀಕ್ಷಕರನ್ನು ತಿರುವನ್ವೇಲಿ ಜಿಲ್ಲೆಯಿಂದ ಎತ್ತಂಗಡಿ ಮಾಡಲಾಗಿದೆ. ಅಲ್ಲದೇ, ಯಾವುದೇ ಸ್ಥಳ ನಿಯುಕ್ತಿ ಮಾಡದೇ ಖಾಲಿ ಮೀಸಲು(ವಿಆರ್) ಇರಿಸಲಾಗಿದೆ. ಇದರ ವಿರುದ್ಧ ನೇತಾಜಿ ಸುಭಾಷ್ ಸೇನಾ ಮತ್ತು ಪುರಟ್ಚಿ ಭಾರತಮ್ ಕಚ್ಚಿ ಎಂಬ ರಾಜಕೀಯ ಸಂಘಟನೆಗಳು ತಿರುನಲ್ವೇಲಿ ಮತ್ತು ಅಂಬಾಸಮುದ್ರಂನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಹೇಳಿವೆ.
2022ರ ಅಕ್ಟೋಬರ್ 15ರಂದು ಅಂಬಾಸಮುದ್ರಂನಲ್ಲಿ ನಿಯೋಜಿಸಲಾದ ಐಪಿಎಸ್ ಅಧಿಕಾರಿ ಬಲ್ವೀರ್ ಸಿಂಗ್ ಆರೋಪ ಎದುರಿಸುತ್ತಿರುವವರು. ಜಿಲ್ಲಾಧಿಕಾರಿ ಕಾರ್ತಿಕೇಯನ್ ಆರೋಪಿ ಅಧಿಕಾರಿಯ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಬಲ್ವೀರ್ ಸಿಂಗ್ 2020ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದು, ಪ್ರತಿಷ್ಠಿತ ಬಾಂಬೆ ಐಐಟಿಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ.
ಸಂತ್ರಸ್ತರ ಪ್ರಕಾರ, ಇಲ್ಲಿನ ಹತ್ತು ಯುವಕರನ್ನು ಗುಂಪು ಘರ್ಷಣೆ ಮತ್ತು ಇತರ ಸಣ್ಣಪುಟ್ಟ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. ನಮ್ಮನ್ನು ಠಾಣೆಗೆ ಕರೆತಂದ ಮೇಲೆ ಬಲ್ವೀರ್ ಸಿಂಗ್ ಚಿತ್ರಹಿಂಸೆ ನೀಡಿದರು. ನಮ್ಮನ್ನು ಕಸ್ಟಡಿಯಲ್ಲಿ ಹಾಕಿ ಥಳಿಸಿದರು. ಬಳಿಕ ಕೈಗವಸು ಧರಿಸಿ ಹಲ್ಲು ಕೀಳುವ ಮೂಲಕ ಚಿತ್ರಹಿಂಸೆ ನೀಡಿದ್ದಾರೆ. ಚೆಲ್ಲಪ್ಪ ಎಂಬ ಯುವಕನನ್ನು ಇತರ ಪೊಲೀಸ್ ಸಿಬ್ಬಂದಿಯಲ್ಲಿ ಗಟ್ಟಿಯಾಗಿ ಹಿಡಿಯಲು ಹೇಳಿ ಬಳಿಕ ಬಲದೇವ್ ಸಿಂಗ್ ಬಲವಂತವಾಗಿ ಮೂರು ಹಲ್ಲುಗಳನ್ನು ಕಬ್ಬಿಣದ ಇಕ್ಕಳದಿಂದ ಎಳೆದು ಕಿತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ನೇತಾಜಿ ಸುಭಾಷ್ ಸೇನೆಯ ವಕೀಲ ಮಹಾರಾಜನ್, ಅಂಬಾಸಮುದ್ರಂ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿ ಹಲವರ ಮೇಲೆ ಹಲ್ಲೆ ನಡೆಸಿದ್ದಾರೆ. ಮರಿಯಪ್ಪನ್ ಎಂಬಾತ ಇತ್ತೀಚೆಗೆ ವಿವಾಹವಾಗಿದ್ದ. ಎಎಸ್ಪಿ ಆತನ ಗುಪ್ತಾಂಗವನ್ನು ಕಾಲಿನಿಂದ ತುಳಿದಿದ್ದಾರೆ. ನೋವಿನಿಂದ ಆತ ಸರಿಯಾಗಿ ಊಟ ಸಹ ಮಾಡದೇ ನರಳುತ್ತಿದ್ದಾನೆ. ಮಲಗಲೂ ಆತ ಪರದಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಅಂಬಾಸಮುದ್ರಂನಲ್ಲಿ ಸುಮಾರು 40 ಜನರ ಹಲ್ಲುಗಳನ್ನು ಸಿಂಗ್ ಕಿತ್ತಿದ್ದು, ಅಧಿಕಾರಿಯನ್ನು ಬಂಧಿಸಿ ಸೇವೆಯಿಂದ ವಜಾಗೊಳಿಸುವಂತೆ ಮಹಾರಾಜನ್ ಒತ್ತಾಯಿಸಿದ್ದಾರೆ. ಅಧಿಕಾರಿಯು ಅಂಬಾಸಮುದ್ರಂನಲ್ಲಿ ನಿಯೋಜನೆಗೊಂಡ ಬಳಿಕ ಠಾಣೆಯಲ್ಲಿ ಚಿತ್ರಹಿಂಸೆ ನೀಡಿದ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಇದೇ ವೇಳೆ ಆರೋಪಿಸಿದ್ದಾರೆ.
ಗೋರಕ್ಷರ ಥಳಿಸಿದ್ದ ಪೊಲೀಸ್: ಮಹಾರಾಷ್ಟ್ರದಲ್ಲಿ ಈಚೆಗೆ ಗೋರಕ್ಷಣೆ ಮಾಡಲು ತೆರಳಿದ್ದ ಗುಂಪನ್ನು ಎಳೆದುಕೊಂಡು ಬಂದಿದ್ದ ಪೊಲೀಸ್ ಅಧಿಕಾರಿ, ಅವರನ್ನು ಹೀನಾಯವಾಗಿ ಥಳಿಸಿದ ಘಟನೆ ನಡೆದಿತ್ತು. ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದ ಗೋರಕ್ಷರನ್ನು ಅರೆಬೆತ್ತಲೆಗೊಳಿಸಿ ಮನಬಂದಂತೆ ಪೊಲೀಸ್ ಅಧಿಕಾರಿ ಥಳಿಸಿದ್ದರು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿತ್ತು.
ಜಾನುವಾರುಗಳನ್ನು ಕಸಾಯಿಖಾನೆಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವಾಹನವನ್ನು ಗೋರಕ್ಷರನ್ನು ತಡೆದು ಪ್ರಶ್ನಿಸಿದ್ದರು. ಈ ವೇಳೆ ಗಲಾಟೆ ನಡೆದು ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಜಾನುವಾರುಗಳನ್ನು ಕೊಂಡೊಯ್ಯುತ್ತಿದ್ದವರು ಗೋರಕ್ಷರ ವಿರುದ್ಧ ದೂರು ನೀಡಿದ್ದರು.
ಇದನ್ನೂ ಓದಿ : ನಿವೃತ್ತ IPS ಅಧಿಕಾರಿ ಮನೆಯಲ್ಲಿ ಕಳ್ಳತನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ, ವಿದೇಶಿ ಕರೆನ್ಸಿ ನಾಪತ್ತೆ