ಮುಂಬೈ: ಸಂಜಯ್ ರಾವುತ್ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಂಜಯ್ ರಾವುತ್ ಜೈಲಿನಿಂದ ಹೊರ ಬಂದಿರುವುದು ಸಂತಸ ತಂದಿದೆ. ನಾವು ಒಳ್ಳೆಯ ಸ್ನೇಹಿತರಾಗಿರುವುದರಿಂದ ಯಾವಾಗಲೂ ಮಾತನಾಡುತ್ತೇವೆ ಎಂದ ಅವರು ತನಿಖಾ ಸಂಸ್ಥೆಗಳು ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ ಎಂದು ಟೀಕಿಸಿದರು.
ಕೇಂದ್ರೀಯ ವ್ಯವಸ್ಥೆಗಳು ಸಾಕುಪ್ರಾಣಿಗಳಂತೆ ವರ್ತಿಸುತ್ತಿರುವುದನ್ನು ಇಡೀ ದೇಶವೇ ಗಮನಿಸುತ್ತಿದೆ. ನ್ಯಾಯಾಲಯ ಸಾಮಾನ್ಯ ಜನರ ಭರವಸೆಯ ಕಿರಣವಾಗಿದೆ. ಆದರೆ, ಯಾರು ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಾರೆ ಅವರನ್ನು ಕೋರ್ಟ್ ಮುಂದೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಿವಸೇನೆ ಯಾವತ್ತೂ ಒಂದೇ, ಅದರಲ್ಲಿ ಯಾವುದೇ ಬಣಗಳಿಲ್ಲ: ಇಲ್ಲಿಯವರೆಗೂ ಕೇಂದ್ರ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಹಲವು ಪಕ್ಷಗಳು ಒಡೆದಿದೆ. ಓಡಿ ಹೋದವರಿಗೆ ಸಂಜಯ್ ರಾವುತ್ ತಕ್ಕ ಪಾಠ ಕಲಿಸಿದ್ದಾರೆ. ಸಂಜಯ್ ರಾವುತ್ ನಮ್ಮ ಸೇನೆಯ ಫಿರಂಗಿ, ಅವರ ಬಂಧನದ ನಂತರ ನಾನು ಭಾವುಕನಾಗಿದ್ದೆ ಮತ್ತು ಸಂಜಯ್ ರಾವುತ್ ಅವರು ನಿರ್ಭಯವಾಗಿ ಹೋರಾಡಿ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಜೊತೆಗೆ ಶಿವಸೇನೆಗಾಗಿ ನಾನು ಹತ್ತು ಬಾರಿಯಾದರೂ ಜೈಲಿಗೆ ಹೋಗಲು ಸಿದ್ಧ. ನಾನು ನನ್ನ ಪಕ್ಷವನ್ನು ತಾಯಿಯೆಂದು ಭಾವಿಸಿದ್ದೇನೆ. ಎಂದಿಗೂ ನಾನು ನನ್ನ ಪಕ್ಷದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುವುದಿಲ್ಲ. ಆ ಮನಸ್ಥಿತಿಯೂ ನನಗಿಲ್ಲ ನಮ್ಮ ಶಿವಸೇನೆ ಯಾವತ್ತು ಒಂದೇ, ಅದರಲ್ಲಿ ಯಾವುದೇ ಬಣಗಳಿಲ್ಲ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮತ್ತೆ ಎನ್ಪಿಎಸ್ ಜಾರಿ : ಪ್ರಿಯಾಂಕಾ ವಾದ್ರಾ ಭರವಸೆ