ಕರ್ನಾಟಕದ ನೂತನ ರಾಜ್ಯಪಾಲರಾಗಿ ಆಯ್ಕೆಯಾಗಿರುವ ಥಾವರ್ ಚಂದ್ ಗೆಹ್ಲೋಟ್ ಪ್ರಸ್ತುತ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. 1948ಮೇ 18ರಂದು ಇಲ್ಲಿನ ಉಜ್ಜೈನಿ ಜಿಲ್ಲೆಯ ರೂಪೇಟ ಹಳ್ಳಿಯಲ್ಲಿ ಥಾವರ್ ಚಂದ್ ಗೆಹ್ಲೋಟ್ ಜನಿಸಿದರು. ಇವರ ತಂದೆ ಶ್ರೀರಾಮ್ಲಾಲ್ ಗೆಹ್ಲೋಟ್, ತಾಯಿ ಶ್ರೀಮತಿ ಸುಮನ್ ಬಾಯಿ.
ಇವರು ಉಜ್ಜೈನಿಯ ವಿಕ್ರಂ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದಿದ್ದಾರೆ. ಬಳಿಕ 1965, ಮೇ 1ರಂದು ಅನಿತಾ ಗೆಹ್ಲೋಟ್ ಅವರನ್ನು ವಿವಾಹವಾದರು. ದಂಪತಿಗೆ ಓರ್ವ ಮಗಳು ಮೂವರು ಗಂಡು ಮಕ್ಕಳಿದ್ದಾರೆ. ವಿದ್ಯಾರ್ಥಿ ಜೀವನದಲ್ಲೇ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದ ಇವರು ವಿದ್ಯಾರ್ಥಿ ಸಂಘದ ನಾಯಕರಾಗಿ ಗುರುತಿಸಿಕೊಂಡಿದ್ದರು.
ಆರಂಭದಿಂದಲೂ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಅಂತಲೇ ಹೆಸರಾಗಿದ್ದ ಅವರು, ಪರಿಶಿಷ್ಟ ಜಾತಿ ಸಮುದಾಯ ಪ್ರತಿನಿಧಿಸಿದ ಬಿಜೆಪಿಯ ಅತ್ಯಂತ ಪ್ರಮುಖ ವ್ಯಕ್ತಿ ಎನಿಸಿದರು.
ಕುತೂಹಲಕಾರಿ ಸಂಗತಿಗಳು
ಗೆಹ್ಲೋಟ್ 'ಬಾಲೈ ಸಮಾಜ' ಎಂಬ ಸಂಘಟನೆಯ ಮೂಲಕ ಶೋಷಿತ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೆ ಮಧ್ಯಪ್ರದೇಶ ಶಾಸಕಾಂಗವು ಹೊರತರುವ ತ್ರೈಮಾಸಿಕ ಪತ್ರಿಕೆ ‘ವಿದ್ಯಾಯಾನಿ’ಗೆ ಹಲವು ಬರಹಗಳನ್ನ ಬರೆಯುತ್ತಾರೆ.
ರಾಜಕೀಯ ದಾರಿ
- 1996 ಮತ್ತು 2009ರ ನಡುವೆ ಸಂಸತ್ ಸದಸ್ಯರಾದರು. ಗೆಹ್ಲೋಟ್ ಮಧ್ಯಪ್ರದೇಶದ ಶಾಜಾಪುರ ಕ್ಷೇತ್ರವನ್ನು ಪ್ರತಿನಿಧಿಸಿದರು.
- 2007: ಕಾರ್ಮಿಕ ಸ್ಥಾಯಿ ಸಮಿಯಿಯ ಸದಸ್ಯರಾದರು.
- 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಕಂಡಿದ್ದರು.
- 2012: ಏಪ್ರಿಲ್ 2012ರಲ್ಲಿ ಅವರು ರಾಜ್ಯಸಭೆಗೆ ಆಯ್ಕೆಯಾದರು. ಕಾರ್ಮಿಕ ಸದಸ್ಯರ ಸಮಿತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಸಮಿತಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಮಾಲೋಚನಾ ಸಮಿತಿಯ ಸದಸ್ಯರಾಗಿದ್ದರು.
- 2014: 27 ಮೇ 2014ರಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದರು.
- 2018: ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾದರು.
ಗೆಹ್ಲೋಟ್ ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಪ್ರಯಾಣ ಪ್ರಾರಂಭಿಸಿ ಪ್ರಸ್ತುತ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ತಮ್ಮ ಸಚಿವಾಲಯದ ಮೊದಲ ಆದ್ಯತೆಯೆಂದರೆ ದಲಿತರು ಮತ್ತು ಬಡವರ ಉನ್ನತಿಗಾಗಿ ಕೆಲಸ ಮಾಡುವುದು ಎಂದು ಹೇಳಿದ್ದರು. ಗೆಹ್ಲೋಟ್ ಅವರನ್ನು ಕ್ಯಾಬಿನೆಟ್ನಲ್ಲಿ ಸೇರಿಸುವ ನಿರ್ಧಾರವನ್ನು ಸಮಾಜದ ಹಿಂದುಳಿದ ವರ್ಗಗಳ ಪ್ರಾತಿನಿಧ್ಯವೆಂದು ಪರಿಗಣಿಸಲಾಗಿತ್ತು. ಅವರು ಬಿಜೆಪಿಯ ಪರಿಶಿಷ್ಟ ಜಾತಿ ಮೋರ್ಚಾದ ಉಸ್ತುವಾರಿಯಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.
ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಸಚಿವಾಲಯವು ‘ಪರಿಶಿಷ್ಟ ಜಾತಿ, ಇತರ ಹಿಂದುಳಿದ ವರ್ಗಗಳು ಮತ್ತು ವಿಕಲಚೇತನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತದೆ‘ ಎಂದು ಹೇಳಿದ್ದರು. ಹಿರಿಯ ನಾಗರಿಕರಿಗೆ ಯೋಜನೆಗಳ ಅನುಷ್ಠಾನವನ್ನು ಇಲಾಖೆ ಖಚಿತಪಡಿಸುತ್ತದೆ ಮತ್ತು ಡ್ರಗ್ಸ್ ಹಾವಳಿ ತಡೆಗಟ್ಟುವ ಯೋಜನೆಗಳು ಜಾರಿ ಮಾಡಲಿದೆ ಎಂದಿದ್ದರು.
ಗೆಹ್ಲೋಟ್ ರಾಜಕೀಯ ಮೆಟ್ಟಿಲುಗಳು
- ಗೆಹ್ಲೋಟ್ 1977 ರಿಂದ 1980ರವರೆಗೆ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾಗಿದ್ದರು
- 1980, 1990, 1993ರಲ್ಲಿ ಮಧ್ಯಪ್ರದೇಶದ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದರು.
- 1980ರಲ್ಲಿ ಅವರನ್ನು ಅಂದಾಜು ಸಮಿತಿಯ ಸದಸ್ಯರಾಗಿ ಮತ್ತು 1990ರಲ್ಲಿ ಕಾರ್ಮಿಕ ಸಲಹಾ ಸಮಿತಿಯ ಸದಸ್ಯರಾಗಿ ನೇಮಿಸಲಾಯಿತು.
- 1985ರಲ್ಲಿ ಭಾರತೀಯ ಜನತ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ಗೆಹ್ಲೋಟ್ ಅವರನ್ನು ನೇಮಿಸಲಾಯಿತು
- 1986 ರಿಂದ 1987ರವರೆಗೆ ಮಧ್ಯಪ್ರದೇಶ ಬಿಜೆಪಿಯ ಅಧ್ಯಕ್ಷರಾಗಿದ್ದರು.
- 1990 ರಿಂದ 1992ರವರೆಗೆ ಅವರು ರಾಜ್ಯ, ಜಲಸಂಪನ್ಮೂಲ, ನರ್ಮದಾ ಕಣಿವೆ ಅಭಿವೃದ್ಧಿ, ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ, ಅಂತ್ಯೋದಯ ಕಾರ್ಯಕ್ರಮ ಮತ್ತು ಮಧ್ಯಪ್ರದೇಶದಲ್ಲಿ 20 ಅಂಶಗಳ ಕಾರ್ಯಕ್ರಮದ ಅನುಷ್ಠಾನ ಸಚಿವರಾಗಿದ್ದರು.
- 1996,1998,1999ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು.
- 1996 ಮತ್ತು 1999ರಲ್ಲಿ ಕಾರ್ಮಿಕ ಸಚಿವಾಲಯದ ಸಮಾಲೋಚನಾ ಸಮಿತಿಯ ಸದಸ್ಯ ಹುದ್ದೆಗಳನ್ನು ಅಲಂಕರಿಸಿದರು. ಕೃಷಿ ಸಮಿತಿಯ ಸದಸ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
- 2000 ರಿಂದ 2001ರವರೆಗೆ ಅವರನ್ನು ಮಹಿಳಾ ಸಬಲೀಕರಣ ಸಮಿತಿಯ ಸದಸ್ಯರಾಗಿ ಮತ್ತು ವಿದೇಶಾಂಗ ಸಚಿವಾಲಯದ ಸಮಾಲೋಚನಾ ಸಮಿತಿಯ ಸದಸ್ಯರಾಗಿ ನೇಮಿಸಲಾಯಿತು.
- ಮೇ 2014ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಆರಂಭಿಕ ಜೀವನ
- 1975-76: ತುರ್ತು ಪರಿಸ್ಥಿತಿ ವೇಳೆ ಆಂತರಿಕ ಭದ್ರತಾ ಕಾಯ್ದೆಯಡಿ ಬಂಧನವಾಗಿ ಉಜ್ಜೈನಿ ಜಿಲ್ಲಾ ಜೈಲಿನಲ್ಲಿ ಸೆರೆಮನೆವಾಸ ಅನುಭವಿಸಿದ್ದರು.
- 1968-71: ಕಾರ್ಮಿಕರ ಆಂದೋಲನಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಬಂಧನಕ್ಕೊಳಗಾದರು ಮತ್ತು ಸುಮಾರು 10 ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು.
- 1967-75: ಭಾರತೀಯ ಮಜ್ದೂರ್ ಸಂಘಕ್ಕೆ ಅಂಗಸಂಸ್ಥೆ ಹೊಂದಿರುವ ಗ್ರ್ಯಾಸಿಮ್ ಎಂಜಿನಿಯರಿಂಗ್ ವರ್ಕರ್ಸ್ ಯೂನಿಯನ್, ಥಾವರ್ ಚಂದ್ ಖಜಾಂಚಿಯಾಗಿ ಸೇವೆ ಸಲ್ಲಿಸಿದರು.
- 1967-75: ರಾಸಾಯನಿಕ ಕಾರ್ಮಿಕರ ಸಂಘವು ಭಾರತೀಯ ಮಜ್ದೂರ್ ಸಂಘಕ್ಕೆ ಇವರನ್ನು ಕಾರ್ಯದರ್ಶಿಯಾಗಿ ನೇಮಿಸಿತು.
- 1962-77: ಆರ್ಎಸ್ಎಸ್ ಸಂಘಟನೆಯ ನಗರ ಕಾರ್ಯವಾಹಕ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಒಟ್ಟು ಆಸ್ತಿ ಮತ್ತು ಸ್ವತ್ತುಗಳು
ಚುನಾವಣೆಯ ವೇಳೆ ತಮ್ಮ ಅಫಿಡವಿಟಟ್ನಲ್ಲಿ ಗೆಹ್ಲೋಟ್ ತಮ್ಮ ಒಟ್ಟು ಆಸ್ತಿ 20.17 ಲಕ್ಷ ಎಂದು ಘೋಷಿಸಿಕೊಂಡಿದ್ದಾರೆ.