ಭಾರತದ ರಾಷ್ಟ್ರಪತಿಗಳು ಯಾವೆಲ್ಲ ಅಧಿಕಾರವನ್ನು ಹೊಂದಿರುತ್ತಾರೆ ಮತ್ತು ಅವನ್ನು ಅವರು ಯಾವ ಸಂದರ್ಭಗಳಲ್ಲಿ ಚಲಾಯಿಸುತ್ತಾರೆ ಎಂಬ ವಿಷಯಗಳು ಸಾಕಷ್ಟು ಕುತೂಹಲಕರವಾಗಿವೆ. ಭಾರತದ ರಾಷ್ಟ್ರಪತಿಗಳಿಗೆ ಏನೆಲ್ಲ ಅಧಿಕಾರಗಳಿವೆ ಎಂಬುದನ್ನು ನೋಡೋಣ ಬನ್ನಿ.
ಪ್ರಧಾನಮಂತ್ರಿಗಳ ನೇತೃತ್ವದ ಕೇಂದ್ರ ಸಚಿವ ಸಂಪುಟದ ಸಲಹೆಯ ಮೇರೆಗೆ ರಾಜ್ಯಗಳು ಮತ್ತು ದೇಶದಲ್ಲಿ ಸುಗ್ರೀವಾಜ್ಞೆಗಳನ್ನು ಪ್ರಕಟಿಸಲು, ಕ್ಷಮಾದಾನ ನೀಡಲು ಮತ್ತು ತುರ್ತು ಪರಿಸ್ಥಿತಿ ಘೋಷಣೆಗೆ ಸಹಿ ಹಾಕುವ ಅಧಿಕಾರವನ್ನು ದೇಶದ 15 ನೇ ರಾಷ್ಟ್ರಪತಿಯಾಗಿರುವ ದ್ರೌಪದಿ ಮುರ್ಮು ಅವರು ಹೊಂದಿರುತ್ತಾರೆ.
ಸಂವಿಧಾನದ ಮುಖ್ಯಸ್ಥರಾಗಿರುವ ರಾಷ್ಟ್ರಪತಿಗಳು ಅದರ ಪಾಲಕರಾಗಿದ್ದಾರೆ ಮತ್ತು ಸಂಸತ್ತಿನ ಅಧಿವೇಶನಗಳನ್ನು ಕರೆಯುವ ಅಧಿಕಾರವನ್ನು ಹೊಂದಿದ್ದಾರೆ. ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿ ಇವರು ಕಾರ್ಯನಿರ್ವಹಿಸುತ್ತಾರೆ.
ಅನುಪಾತದ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಗುಣವಾಗಿ ಏಕ ವರ್ಗಾವಣೆ ಮತದ ಮೂಲಕ, ಸಂಸತ್ತಿನ ಎರಡೂ ಸದನಗಳು ಮತ್ತು ರಾಜ್ಯಗಳ ಶಾಸನ ಸಭೆಗಳ ಚುನಾಯಿತ ಸದಸ್ಯರನ್ನು ಒಳಗೊಂಡಿರುವ ಎಲೆಕ್ಟೋರಲ್ ಕಾಲೇಜ್ ಸದಸ್ಯರು, ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದರು.
ನೂತನ ರಾಷ್ಟ್ರಪತಿಗಳ ಅಧಿಕಾರಾವಧಿಯು ಐದು ವರ್ಷಗಳ ಕಾಲ ಅಂದರೆ, ಜುಲೈ 24, 2027 ರವರೆಗೆ ಇರುತ್ತದೆ. ನಿಯಮಗಳ ಪ್ರಕಾರ ಅವರು ಮರುಚುನಾಯಿತರಾಗಲು ಅವಕಾಶವಿದೆ. ದೇಶದ ಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಮಾತ್ರ ಎರಡು ಅವಧಿಗೆ ಆಯ್ಕೆಯಾಗಿದ್ದರು.
ರಾಷ್ಟ್ರಪತಿಗಳನ್ನು ಅವರ ಸ್ಥಾನದಿಂದ ಪದಚ್ಯುತಗೊಳಿಸಬೇಕಾದರೆ, ಈ ಪ್ರಕ್ರಿಯೆಯು ಸಂವಿಧಾನದ 61 ನೇ ವಿಧಿಯಲ್ಲಿ ಸೂಚಿಸಲಾದ ಕಾರ್ಯವಿಧಾನಕ್ಕೆ ಅನುಗುಣವಾಗಿರಬೇಕು. ಇನ್ನು, ರಾಷ್ಟ್ರಪತಿಗಳು ಉಪರಾಷ್ಟ್ರಪತಿಗಳಿಗೆ ರಾಜೀನಾಮೆ ಪತ್ರ ಬರೆಯುವ ಮೂಲಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು.
ಭಾರತ ಒಕ್ಕೂಟ ಗಣರಾಜ್ಯದ ಕಾರ್ಯನಿರ್ವಾಹಕ ಅಧಿಕಾರವು ರಾಷ್ಟ್ರಪತಿಗಳಿಗೆ ಇದೆ ಮತ್ತು ಸಂವಿಧಾನದ ಅನುಸಾರವಾಗಿ ಮುರ್ಮು ನೇರವಾಗಿ ಅಥವಾ ತಮ್ಮ ಅಧೀನ ಅಧಿಕಾರಿಗಳ ಮೂಲಕ ಅಧಿಕಾರ ಚಲಾಯಿಸಬಹುದು. ಸಾಂವಿಧಾನಿಕ ನಿಬಂಧನೆಗಳ ಪ್ರಕಾರ, ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಅವಲಂಬಿಸಿ ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರವೂ ರಾಷ್ಟ್ರಪತಿಗಳಿಗೆ ಇದೆ.
ಸಂಸತ್ತಿನ ಎರಡೂ ಸದನಗಳ ಅಧಿವೇಶನ ನಡೆಯುತ್ತಿರುವಾಗ ಹೊರತುಪಡಿಸಿ, ಯಾವುದೇ ಸಮಯದಲ್ಲಿ ಅವರು ಸುಗ್ರೀವಾಜ್ಞೆಗಳನ್ನು ಪ್ರಕಟಿಸಬಹುದು. ಹಣಕಾಸು ಮತ್ತು ಹಣದ ಬಿಲ್‌ಗಳನ್ನು ಸಂಸತ್ತಿನ ಮುಂದೆ ಇಡಲು ಶಿಫಾರಸುಗಳನ್ನು ಮಾಡಬಹುದು. ಬಿಲ್‌ಗಳಿಗೆ ಸಮ್ಮತಿ ನೀಡಬಹುದು, ಕ್ಷಮಾದಾನ ನೀಡಬಹುದು, ಹಿಂಪಡೆಯಬಹುದು, ಶಿಕ್ಷೆಯನ್ನು ಕಡಿಮೆ ಮಾಡಬಹುದು ಅಥವಾ ಅಮಾನತುಗೊಳಿಸಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ಶಿಕ್ಷೆಯನ್ನು ರದ್ದುಗೊಳಿಸಬಹುದು ಅಥವಾ ಬದಲಾಯಿಸಬಹುದು.
ಯಾವುದೇ ಒಂದು ರಾಜ್ಯದಲ್ಲಿ ಸಾಂವಿಧಾನಿಕ ವ್ಯವಸ್ಥೆಯು ಕುಸಿದು ಬಿದ್ದಾಗ, ಆ ರಾಜ್ಯ ಸರ್ಕಾರದ ಎಲ್ಲಾ ಕಾರ್ಯಗಳನ್ನು ಅಥವಾ ಯಾವುದೇ ಒಂದು ಕಾರ್ಯವನ್ನು ರಾಷ್ಟ್ರಪತಿಗಳು ತಾವೇ ವಹಿಸಿಕೊಳ್ಳಬಹುದು. ಯುದ್ಧ ಅಥವಾ ಬಾಹ್ಯ ಆಕ್ರಮಣ ಅಥವಾ ಸಶಸ್ತ್ರ ದಂಗೆಯಿಂದ ಭಾರತ ಅಥವಾ ಅದರ ಭೂಪ್ರದೇಶದ ಯಾವುದೇ ಭಾಗದ ಸುರಕ್ಷತೆಗೆ ಬೆದರಿಕೆಯೊಡ್ಡುವ ಗಂಭೀರ ತುರ್ತುಸ್ಥಿತಿ ಎದುರಾಗಿದ್ದು ರಾಷ್ಟ್ರಪತಿಗಳಿಗೆ ಮನವರಿಕೆಯಾದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು.