ಜೋಗುಲಾಂಬ ಗದ್ವಾಲ್(ತೆಲಂಗಾಣ): ಬಿದ್ದು ಗಾಯಗೊಂಡ ಬಾಲಕನಿಗೆ ಖಾಸಗಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಬಳಸಿ ಚಿಕಿತ್ಸೆ ನೀಡಿದ ಘಟನೆ ಜೋಗುಲಾಂಬ ಗದ್ವಾಲ್ ಜಿಲ್ಲೆಯ ಐಝಾದಲ್ಲಿ ನಡೆದಿದೆ. ಈ ಬಗ್ಗೆ ಸಂತ್ರಸ್ತ ಬಾಲಕನ ತಂದೆ ವಂಶಿಕೃಷ್ಣ ಎಂಬುವವರು ದೂರು ನೀಡಿದ್ದಾರೆ.
ಪ್ರಕರಣದ ವಿವರ: ಕರ್ನಾಟಕದ ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ವಂಶಿಕೃಷ್ಣ ಮತ್ತು ಸುನೀತಾ ದಂಪತಿ ತಮ್ಮ ಸಂಬಂಧಿಕರ ಮದುವೆಗೆ ಐಝಾಕ್ಕೆ ಬಂದಿದ್ದರು. ಅವರ ಪುತ್ರ ಪ್ರವೀಣ್ ಚೌಧರಿ (7) ಗುರುವಾರ ರಾತ್ರಿ ಮದುವೆ ಸಮಾರಂಭದಲ್ಲಿ ಆಟವಾಡುತ್ತಿದ್ದಾಗ ಬಿದ್ದಿದ್ದಾನೆ. ಎಡಗಣ್ಣಿನ ಮೇಲ್ಬಾಗಕ್ಕೆ ಗಾಯವಾದ ಕಾರಣ ಬಾಲಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯವಾದ ಸ್ಥಳದಲ್ಲಿ, ವೈದ್ಯಕೀಯ ಸಿಬ್ಬಂದಿ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಬಳಸಿ ಬ್ಯಾಂಡೇಜ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಗಮನಿಸಿದ ಬಾಲಕನ ತಂದೆ ವಂಶಿಕೃಷ್ಣ ಆಸ್ಪತ್ರೆ ವೈದ್ಯ ನಾಗಾರ್ಜುನ ಅವರನ್ನು ತರಾಟೆಗೆ ತೆಗೆದುಕೊಂಡರು. ಸಿಬ್ಬಂದಿ ತಪ್ಪು ಮಾಡಿರಬಹುದು. ಆದರೆ ಹುಡುಗ ಚೆನ್ನಾಗಿಯೇ ಇದ್ದಾನೆ. ಏನಾದರೂ ಸಂಭವಿಸಿದರೆ ಅವರೇ ಹೊಣೆ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಇವರ ನಡೆಯಿಂದ ಆಕ್ರೋಶಗೊಂಡ ಸಂತ್ರಸ್ತ ಬಾಲಕನ ತಂದೆ ಐಝಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗ್ರಾಮದಾದ್ಯಂತ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಐ ನರೇಶ್‌ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರೇಮಿಯ ಪತ್ನಿಯ ಕೂದಲು ಕತ್ತರಿಸಿ, ಕಣ್ಣಿಗೆ ಫೆವಿಕಾಲ್ ಹಾಕಿದ ಪಾಗಲ್ ಪ್ರೇಯಸಿ
ಕೈಗೆ ಹಾಕಿದ್ದ ಬ್ಯಾಂಡೇಜ್ನಲ್ಲಿ ಬ್ಲೇಡ್: ಇತ್ತೀಚೆಗೆ ವಿಜಯವಾಡ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿ ಬಂದಿತ್ತು. ಹಾವು ಕಚ್ಚಿ ಆಸ್ಪತ್ರೆಗೆ ಬಂದ ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರು ಸರ್ಜಿಕಲ್ ಬ್ಲೇಡ್ ಇಟ್ಟು ಕೈಗೆ ಬ್ಯಾಂಡೇಜ್ ಹಾಕಿದ್ದರು. ಇದರಿಂದ ಸಂತ್ರಸ್ತೆಯ ಕೈಗೆ ಗಂಭೀರ ಸೋಂಕು ತಗುಲಿದೆ. ಸಿಬ್ಬಂದಿ ನಿರ್ಲಕ್ಷ್ಯದಿಂದ ಮಹಿಳೆ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಂಬಂಧಿಕರು ದೂರಿದ್ದರು.
ಇದನ್ನೂ ಓದಿ: ಕೈಗೆ ಹಾಕಿದ್ದ ಬ್ಯಾಂಡೇಜ್ನಲ್ಲಿತ್ತು ಬ್ಲೇಡ್: ಸಿಬ್ಬಂದಿಗಳ ನಿರ್ಲಕ್ಷ್ಯ ಆರೋಪ