ನೆಲ್ಲೂರು(ಆಂಧ್ರಪ್ರದೇಶ): ಆತ್ಮಹತ್ಯೆ ಮಾಡಿಕೊಂಡ ಪತಿ ಶವವನ್ನು ಪೋಸ್ಟ್‌ಮಾರ್ಟಂ ಮಾಡಲು ಮಹಿಳೆಯೊಬ್ಬರು ಹರಸಾಹಸ ಪಟ್ಟಿದ್ದು, ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯನೊಬ್ಬ ಲಂಚ ಕೇಳಿರುವ ಅಮಾನವೀಯ ಘಟನೆಯೊಂದು ನೆಲ್ಲೂರು ಜಿಲ್ಲೆಯ ಉದಯಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯನ ಹೆಸರು ಸಂದಾನಿ ಬಾಷಾ.
ದೂರವಾಣಿ ಮೂಲಕ ಮಾತನಾಡಿರುವ ವೈದ್ಯ ಹಣ ನೀಡಿದರೆ ಮಾತ್ರ ಗಂಡನ ದೇಹವನ್ನು ಪೋಸ್ಟ್‌ಮಾರ್ಟಂ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ದಿಗ್ಭ್ರಮೆಗೊಂಡ ಮಹಿಳೆ ಮಾಧ್ಯಮದ ಮುಂದೆ ತನಗಾಗುತ್ತಿರುವ ಅನ್ಯಾಯ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಕಾರ್ಮಿಕನೋರ್ವನಿಗೆ ಹಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಾ ತನ್ನ ಕುಟುಂಬವನ್ನು ಸಾಕುವುದು ಕಷ್ಟಕರವಾಗಿತ್ತು. ಹಾಗಾಗಿ ಕೆಲಸಕ್ಕಾಗಿ ಹಳ್ಳಿಯಿಂದ ಪಟ್ಟಣಕ್ಕೆ ಬಂದಿದ್ದನು. ಕೆಲ ದಿನಗಳಿಂದ ಪಟ್ಟನದಲ್ಲಿ ದುಡಿಯುತ್ತಿದ್ದ ಕಾರ್ಮಿಕನಿಗೆ ಮಾಲೀಕ ಸಂಬಳ ಕೊಡದೇ ಸತಾಯಿಸಿದ್ದನು. ಇದರಿಂದಾಗಿ ಎರಡು ದಿನಗಳಿಂದ ಆತ ತೀವ್ರ ಖಿನ್ನತೆಗೆ ಜಾರಿದ್ದನು. ತನ್ನ ಪತ್ನಿಗೂ ಹೇಳದೆ ತೋಟಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉದಯಗಿರಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಾಗ ಶವ ಪರೀಕ್ಷೆಗೆ ವೈದ್ಯರು ಲಂಚ ಕೇಳಿದ್ದಾರೆ. ಕೈಯಲ್ಲಿ ಒಂದು ಪೈಸೆಯೂ ಇಲ್ಲ ಎಂದು ಹೇಳಿ ತನ್ನ ಗಂಡನ ಶವಪರೀಕ್ಷೆ ನಡೆಸುವಂತೆ ಬೇಡಿಕೊಂಡರೂ ವೈದ್ಯರು ಕನಿಕರ ತೋರಿಲ್ಲ. ಮರಣೋತ್ತರ ಪರೀಕ್ಷೆಗೆ 16,000 ರೂ. ಬೇಡಿಕೆ ಇಟ್ಟಿದ್ದರು. ಫೋನ್ ಕೊಡಿ ಎಂದು ಹೇಳಿ ಆಕೆಗೆ ನಂಬರ್ ಕೊಟ್ಟು ವೈದ್ಯ ವೃತ್ತಿಗೆ ಮಸಿ ಬಳಿದಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಕೊನೆಗೆ ವೈದ್ಯ ಸಂದಾನಿ ಬಾಷಾ ಮೇಲೆ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರೈಲು ಬರುತ್ತಿದ್ದರೂ ಹಳಿ ಮೇಲೆಯೇ ನಿಂತ ವ್ಯಕ್ತಿ.. ಎರಡೂ ಕಾಲುಗಳು ಕಟ್