ಬೇಗುಸರಾಯ್ (ಬಿಹಾರ): ಬಿಹಾರದಲ್ಲಿ ಕೆಲವರು ತಾಲಿಬಾನ್ ರೀತಿ ನಡೆದುಕೊಂಡ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೇಗುಸರಾಯ್ ಜಿಲ್ಲೆಯಲ್ಲಿ ಕಳ್ಳತನ ಆರೋಪದ ಮೇಲೆ ಯುವಕನನ್ನು ಹಿಡಿದು ಆತನಿಗೆ ಅಮಾನವೀಯವಾಗಿ ಶಿಕ್ಷೆ ನೀಡಿದ್ದಾರೆ. ಆರೋಪಿಗೆ ನೆಲದ ಮೇಲೆ ಬಿದ್ದ ಎಂಜಲು ನೆಕ್ಕುವಂತೆ ಮಾಡಿ, ಬಸ್ಕಿ ಹೊಡಿಸಲಾಗಿದೆ.
ಇಲ್ಲಿನ ಮೋಹನಪುರ ಗ್ರಾಮದ ಮನೆಯೊಂದರಲ್ಲಿ ಯುವಕ ಕಳ್ಳತನ ಮಾಡುತ್ತಿದ್ದಾಗ ಜನರ ಕೈಗೆ ಆತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಅಂತೆಯೇ, ಗ್ರಾಮಸ್ಥರು ಆರೋಪಿಯನ್ನು ಪಂಚಾಯಿತಿಗೆ ಕರೆದಿದ್ದಾರೆ. ಅಲ್ಲಿ ಇಡೀ ಗ್ರಾಮಸ್ಥರ ನಡುವೆಯೇ ಆರೋಪಿ ಎದುರು ನೆಲದ ಮೇಲೆ ಉಗಿಯಲಾಗಿದೆ. ಜೊತೆಗೆ ಕೆಳಗಡೆ ಬಿದ್ದ ಉಗುಳನ್ನು ನೆಕ್ಕುವಂತೆ ಸೂಚಿಸಿದ್ದಾರೆ. ಈ ವೇಳೆ ಕೆಲವರು ಮೊಬೈಲ್ನಲ್ಲಿ ವಿಡಿಯೋ ಮಾಡಿ, ಫೋಟೋಗಳನ್ನು ಸೆರೆ ಹಿಡಿದಿದ್ಧಾರೆ. ಈ ಅಮಾನವೀಯ ಶಿಕ್ಷೆ ನೀಡಿದ ನಂತರ ಗ್ರಾಮಸ್ಥರೇ ಆತನನ್ನು ಬಿಟ್ಟು ಕಳುಹಿಸಿದ್ದಾರೆ.
ಆರೋಪಿಯು ಮನೆಯಲ್ಲಿ 12 ಸಾವಿರ ನಗದು ದೋಚಿದ್ದ ಎನ್ನಲಾಗಿದೆ. ಆದರೆ, ಇದುವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಸದ್ಯ ಈ ತಾಲಿಬಾನ್ ಸಂಸ್ಕೃತಿಯ ಶಿಕ್ಷೆಯ ವಿಡಿಯೋ ವೈರಲ್ ಆಗಿದ್ದು, ಗ್ರಾಮಸ್ಥರ ನಡೆ ಬಗ್ಗೆ ಟೀಕೆಯೂ ವ್ಯಕ್ತವಾಗಿದೆ. ಆದ್ರೆ ಈವರೆಗೆ ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬ್ಗೆ ಮಾಹಿತಿ ಸಿಕ್ಕಿಲ್ಲ.
ಇದನ್ನೂ ಓದಿ: ಕ್ರೈಂ ಧಾರಾವಾಹಿಯಿಂದ ಪ್ರೇರಣೆ: ಬಾಲಕನ ಕಿಡ್ನಾಪ್ ಮಾಡಿ ಕೊಲೆಗೈದ 10ನೇ ಕ್ಲಾಸ್ ವಿದ್ಯಾರ್ಥಿಗಳು!