ಇಡುಕ್ಕಿ: ತಾಯಿ ಎದೆ ಹಾಲು ಕುಡಿಯುತ್ತಲೇ ಮಗುವೊಂದು ಪ್ರಾಣ ಬಿಟ್ಟಿರುವ ವಿಚಿತ್ರ ಘಟನೆ ಇಲ್ಲಿನ ನೆಡುಂಕಂಡಂ ಕರುಣಪುರಂನಲ್ಲಿ ನಡೆದಿದೆ. ಮಗು ಉಸಿರಾಟದಿಂದ ಬಳಲಿ ಸಾವನ್ನಪ್ಪಿದೆ ಎಂಬ ಮಾಹಿತಿ ದೊರೆತಿದೆ.
ಜಿಜಿನ್-ತಿನೋಲ್ ದಂಪತಿಯ ಎರಡೂವರೆ ತಿಂಗಳ ಗಂಡು ಮಗುವಿಗೆ ಹಾಲು ಕುಡಿಯುತ್ತಿರುವ ವೇಳೆ ಉಸಿರಾಟದ ಸಮಸ್ಯೆ ಎದುರಾಗಿದೆ. ಹಾಗಾಗಿ ಎದೆಹಾಲು ಕುಡಿಯುತ್ತಲೇ ಅದು ಮೂರ್ಛೆ ಹೋಗಿದೆ. ಇದರಿಂದ ಗಾಬರಿಗೊಂಡ ದಂಪತಿ ಚೆಟ್ಟುಕುಜಿಯ ಖಾಸಗಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟೊತ್ತಿಗಾಗಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ದೃಢಪಡಿಸಿದರು.
ಮಗುವಿನ ಸಾವಿಗೇನು ಕಾರಣ ಅನ್ನೋದು ನಿಖರವಾಗಿ ತಿಳಿದು ಬಂದಿಲ್ಲ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆಯ ಕುರಿತು ಕಂಪಮ್ಮೇಟ್ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.