ನವದೆಹಲಿ : ಭಾರತದ ವಿಮಾನಯಾನ ಇತಿಹಾಸದಲ್ಲೇ ದಾಖಲೆಯ ಒಪ್ಪಂದದಲ್ಲಿ ಇಂಡಿಗೋ ಕಂಪೆನಿ ಭಾರತ ಮತ್ತು ವಿದೇಶಗಳಲ್ಲಿ ತನ್ನ ಜಾಲ ಬಲಪಡಿಸಲು 500 ಏರ್‌ಬಸ್ ಎ 320 ವಿಮಾನಗಳ ಖರೀದಿಗೆ ನಿರ್ಧರಿಸಿದೆ. ಇಂದು (ಸೋಮವಾರ) ತನ್ನ ಅಧಿಕೃತ ಹೇಳಿಕೆಯಲ್ಲಿ, ಏರ್‌ಕ್ರಾಫ್ಟ್ ಖರೀದಿ ಬೇಡಿಕೆ ಇಂಡಿಗೋದ ಅತಿದೊಡ್ಡ ಬೇಡಿಕೆ ಮಾತ್ರವಲ್ಲದೆ ಯಾವುದೇ ಏರ್‌ಲೈನ್‌ನಿಂದಲೂ ಈವರೆಗಿನ ಇದು ಅತಿ ದೊಡ್ಡ ಏಕೈಕ ವಿಮಾನ ಖರೀದಿಯಾಗಿದೆ. ಎಂಜಿನ್ ಆಯ್ಕೆಯನ್ನು ಸರಿಯಾದ ಸಮಯದಲ್ಲಿ ಮಾಡಲಾಗುತ್ತದೆ. ಇದು A320 ಮತ್ತು A321 ವಿಮಾನಗಳ ಮಿಶ್ರಣವಾಗಿರಲಿದೆ ಎಂದು ಮಾಹಿತಿ ನೀಡಿದೆ. ಪ್ಯಾರಿಸ್ ಏರ್ ಶೋ 2023ರಲ್ಲಿ ಇಂಡಿಗೋ ಮಂಡಳಿಯ ಅಧ್ಯಕ್ಷ ವಿ. ಸುಮಂತ್ರನ್, ಇಂಡಿಗೋದ ಸಿಇಒ ಪೀಟರ್ ಎಲ್ಬರ್ಸ್, ಏರ್‌ಬಸ್‌ನ ಸಿಇಒ ಗುಯಿಲೌಮ್ ಫೌರಿ ಮತ್ತು ಏರ್‌ಬಸ್‌ನ ಮುಖ್ಯ ವಾಣಿಜ್ಯಿಕ ಕ್ರಿಶ್ಚಿಯನ್ ಸ್ಕೆರೆರ್ ಅವರ ಉಪಸ್ಥಿತಿಯಲ್ಲಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ವಿಶ್ವದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಇಂಡಿಗೋ ಒಂದು: ಮುಂದಿನ ದಶಕದಲ್ಲಿ ಸುಮಾರು 1000 ವಿಮಾನಗಳ ಖರೀದಿ ಮಾಡಲಿದ್ದು, ಇದು ಭಾರತದಲ್ಲಿ ಆರ್ಥಿಕ ಬೆಳವಣಿಗೆ, ಸಾಮಾಜಿಕ ಒಗ್ಗಟ್ಟು ಮತ್ತು ಚಲನಶೀಲತೆಯನ್ನು ಹೆಚ್ಚಿಸುವ ತನ್ನ ಧ್ಯೇಯವನ್ನು ಪೂರೈಸಲು ಇಂಡಿಗೋಗೆ ಈ ಖರೀದಿ ಒಪ್ಪಂದ ಅನುವು ಮಾಡಿಕೊಡುತ್ತದೆ ಎಂದು ಸಿಇಒ ಪೀಟರ್ ಎಲ್ಬರ್ಸ್ ಹೇಳಿದ್ದಾರೆ.
2030- 2035ಕ್ಕೆ 500 ವಿಮಾನಗಳ ಹೆಚ್ಚುವರಿ ಖರೀದಿಯೊಂದಿಗೆ ಇಂಡಿಗೋದ ಬೇಡಿಕೆ ಸುಮಾರು 1000 ವಿಮಾನಗಳನ್ನು ತಲುಪಲಿದೆ. ಇಂಡಿಗೋ ಸದ್ಯ 78 ದೇಶೀಯ ಸ್ಥಳಗಳನ್ನು ಸಂಪರ್ಕಿಸುತ್ತಿದೆ. ಶೀಘ್ರದಲ್ಲೇ ಅಂತಾರಾಷ್ಟ್ರೀಯ ಜಾಲ ವಿಸ್ತರಿಸಲಿದೆ.
6 ಹೊಸ ಸ್ಥಳಗಳಿಗೆ ವಿಮಾನಯಾನ ಸೇವೆ ಆರಂಭಿಸಲಿದೆ ಇಂಡಿಗೋ: ಇನ್ನೊಂದೆಡೆ, ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿ ಬೆಳೆದಿರುವ ಇಂಡಿಗೋ ಬೃಹತ್ ಅಂತಾರಾಷ್ಟ್ರೀಯ ವಿಸ್ತರಣಾ ಅಭಿಯಾನ ಆರಂಭಿಸಿದೆ. ಈ ವರ್ಷ ಟಿಬಿಲಿಸಿ, ನೈರೋಬಿ ಮತ್ತು ತಾಷ್ಕೆಂಟ್ ಸೇರಿದಂತೆ ಆಫ್ರಿಕಾ ಮತ್ತು ಮಧ್ಯ ಏಷ್ಯಾದ ಆರು ಹೊಸ ಸ್ಥಳಗಳಿಗೆ ನೇರ ವಿಮಾನಯಾನ ಪ್ರಾರಂಭಿಸಲಿದೆ ಎಂದು ಇಂಡಿಗೋ ಸಂಸ್ಥೆ (ಜೂನ್ 3) ರಂದು ಹೇಳಿಕೊಂಡಿತ್ತು. ಜುಲೈ ಅಂತ್ಯಕ್ಕೆ ಅಥವಾ ಆಗಸ್ಟ್ ಆರಂಭದಲ್ಲಿ ಮುಂಬೈನಿಂದ ನೈರೋಬಿ ಮತ್ತು ಜಕಾರ್ತಾಕ್ಕೆ ನೇರ ವಿಮಾನಯಾನ ಪ್ರಾರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿತ್ತು.
ಆಗಸ್ಟ್‌ನಲ್ಲಿ ದೆಹಲಿಯಿಂದ ಜಾರ್ಜಿಯಾ, ಟಿಬಿಲಿಸಿ ಮತ್ತು ಬಾಕು, ಅಜರ್‌ಬೈಜಾನ್‌ಗೆ ಹಾಗೂ ಸೆಪ್ಟೆಂಬರ್‌ನಲ್ಲಿ ತಾಷ್ಕೆಂಟ್, ಉಜ್ಬೇಕಿಸ್ತಾನ್ ಮತ್ತು ಅಲ್ಮಾಟಿ, ಕಝಾಕಿಸ್ತಾನ್‌ಗೆ ಸಂಪರ್ಕ ಹೊಂದಲಿದೆ. ಒಮ್ಮೆ ಈ ಮಾರ್ಗಗಳ ಕಾರ್ಯಾಚರಣೆ ಆರಂಭವಾದರೆ, ಬಜೆಟ್ ಏರ್‌ಲೈನ್ ಪ್ರಸ್ತುತ 26 ಕ್ಕೆ ಹೋಲಿಸಿದರೆ ಒಟ್ಟು 32 ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲಿದೆ ಎಂದು ಇಂಡಿಗೋ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿತ್ತು.
ಆಗಸ್ಟ್‌ನಲ್ಲಿ ದೆಹಲಿಯಿಂದ ಹಾಂಗ್ಕಾಂಗ್ಗೆ ದೈನಂದಿನ ಸೇವೆಗಳನ್ನು ಪುನರಾರಂಭಿಸುವುದಾಗಿ ಇಂಡಿಗೋ ಹೇಳಿತ್ತು. ಮೂರು ವರ್ಷಗಳ ಹಿಂದೆ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಈ ವಿಮಾನವನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಟಾಟಾ ಗ್ರೂಪ್‌ನ ಏರ್ ಇಂಡಿಯಾ ಮತ್ತು ಅದರ ಕಡಿಮೆ ವೆಚ್ಚದ ವಾಹಕ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಾಬಲ್ಯ ಹೊಂದಿದೆ.
ಇದನ್ನೂ ಓದಿ: 2000 ರೂ. ನೋಟು ಹಿಂಪಡೆಯುವಿಕೆಯಿಂದ ಬ್ಯಾಂಕ್ಗಳಲ್ಲಿ ಠೇವಣಿ ಹೆಚ್ಚಳ: ಎಸ್ಬಿಐ ವರದಿ