ವಾರಣಾಸಿ: ಇಂಡಿಗೋ ಏರ್‌ಲೈನ್ಸ್‌ನಲ್ಲಿ ಪುರುಷ ಮತ್ತು ಮಹಿಳಾ ಪ್ರಯಾಣಿಕರ ನಡುವೆ ವಿಮಾನ ಏರಿದ ನಂತರ ಸೀಟಿಗಾಗಿ ಗಲಾಟೆ ನಡೆದಿದೆ. ಇದಕ್ಕೆ ಪೈಲಟ್ ವಿಮಾನ ಹಾರಿಸಲು ನಿರಾಕರಿಸಿ ಸುಮಾರು ಒಂದೂವರೆ ಗಂಟೆ ಕಾಲ ತಡವಾಗಿ ವಿಮಾನ ಹೊರಟಿತು. ಇದರಿಂದ ಇತರೆ ಪ್ರಯಾಣಿಕರೂ ಆಕ್ರೋಶ ಹೊರಹಾಕಿದ್ದಾರೆ. ಇಬ್ಬರು ಪ್ರಯಾಣಿಕರಿಂದ ಲಿಖಿತ ಒಪ್ಪಿಗೆ ಪಡೆದ ನಂತರ ವಿಮಾನ ವಾರಣಾಸಿಯಿಂದ ಮುಂಬೈಗೆ ತೆರಳಿತು.
ಮಾಹಿತಿಯಂತೆ, ಇಂಡಿಗೋ ಏರ್‌ಲೈನ್ಸ್ ಫ್ಲೈಟ್ 6E5362 ವಾರಣಾಸಿ ವಿಮಾನ ನಿಲ್ದಾಣದಿಂದ ಮುಂಬೈಗೆ ರಾತ್ರಿ 10.45 ಕ್ಕೆ ಟೇಕ್ ಆಫ್ ಆಗಲು ಸಿದ್ಧವಾಗಿತ್ತು. ಈ ವೇಳೆ ಪ್ರಯಾಣಿಕರ ನಡುವೆ ಗಲಾಟೆ ಆರಂಭವಾಗಿತ್ತು. ಇದನ್ನು ತಿಳಿದ ಪೈಲಟ್ ವಿಮಾನವನ್ನು ಮತ್ತೆ ಟಾರ್ಮ್ಯಾಕ್‌ಗೆ ತಂದಿದ್ದಾರೆ. ನಂತರ ರಾತ್ರಿ 12.25 ಮುಂಬೈಗೆ ವಿಮಾನ ಹೊರಟಿದೆ. ಏಪ್ರಿಲ್ 24 ರಂದು ಈ ಘಟನೆ ನಡೆದಿದ್ದು, ಭಾನುವಾರ ವಿಡಿಯೋ ವೈರಲ್ ಆಗಿದೆ.
ವಾರಣಾಸಿ ವಿಮಾನ ನಿಲ್ದಾಣದ ಪಾರ್ಕಿಂಗ್ನಿಂದ ವಿಮಾನ ಹೊರಟಾಗ ಪುರುಷ ಪ್ರಯಾಣಿಕರೊಬ್ಬರು ಮಹಿಳೆಯೊಂದಿಗೆ ಸೀಟಿನ ವಿಚಾರವಾಗಿ ಗಲಾಟೆ ಆರಂಭಿಸಿದರು. ನಂತರ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಗದ್ದಲವನ್ನು ಕೇಳಿದ ಪೈಲಟ್ ವಿಮಾನವನ್ನು ಮತ್ತೆ ಟಾರ್ಮ್ಯಾಕ್‌ಗೆ ತಂದರು. ಇಬ್ಬರೂ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿದಾಗ ವಿಷಯ ಮತ್ತಷ್ಟು ಗಂಭೀರವಾಯಿತು. ಈ ಕಾರಣದಿಂದ ವಿಮಾನವು ಒಂದೂವರೆ ಗಂಟೆ ಕಾಲ ಟಾರ್ಮ್ಯಾಕ್‌ನಲ್ಲಿ ಸಿಕ್ಕಿಹಾಕಿಕೊಂಡಿತು. ಇದರಿಂದ ಇತರ ಪ್ರಯಾಣಿಕರು ತಮ್ಮ ಆಕ್ರೋಶ ಹೊರಹಾಕಿದರು ಎಂದು ಪವನ್ ಪಾಠಕ್ ಎಂಬುವರು ಹೇಳಿದ್ದಾರೆ.
ವಾರಣಾಸಿ ವಿಮಾನ ನಿಲ್ದಾಣದಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಜಗಳವಾಡುತ್ತಿದ್ದ ಇಬ್ಬರು ಪ್ರಯಾಣಿಕರಿಗಾಗಿ ಒಂದೂವರೆ ಗಂಟೆಗೂ ಹೆಚ್ಚು ಕಾಲ 200 ಪ್ರಯಾಣಿಕರನ್ನು ವಿಮಾನದಲ್ಲಿ ಏಕೆ ಕಾಯಿಸಬೇಕಾಯಿತು ಎಂಬ ಬಗ್ಗೆ ತನಿಖೆಯಾಗಬೇಕು. ಇದು ನಾಗರಿಕ ವಿಮಾನಯಾನ ನಿಯಮಗಳಿಗೆ ಸಂಪೂರ್ಣ ವಿರುದ್ಧದ್ದು. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ದೂರು ಸಲ್ಲಿಸಿರುವುದಾಗಿಯೂ ಪ್ರಯಾಣಿಕ ಪವನ್ ಪಾಠಕ್ ಹೇಳಿದ್ದಾರೆ.
ಈ ವಿಚಾರದ ಬಗ್ಗೆ ನನಗೆ ತಿಳಿದಿರಲಿಲ್ಲ, ವಿಮಾನದಲ್ಲಿ ಸೀಟಿಗಾಗಿ ಜಗಳವಾಡಿದ ವ್ಯಕ್ತಿಯ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಾರಣಾಸಿ ವಿಮಾನ ನಿಲ್ದಾಣದ ನಿರ್ದೇಶಕ ಆರ್ಯಮ್ ಸನ್ಯಾಲ್ ತಿಳಿಸಿದರು.
ಇದನ್ನೂ ಓದಿ: ಫೆಡ್ ಆಕ್ರಮಣಕಾರಿ ನೀತಿ : ಚಿನ್ನದ ಬೆಲೆಗಳು ಒತ್ತಡಕ್ಕೆ ಒಳಗಾಗುವ ಸಾಧ್ಯತೆ