ನವದೆಹಲಿ: ಚೆನ್ನೈನಿಂದ ತಿರುಚಿರಾಪಳ್ಳಿಗೆ ಹೊರಡಲು ಸಿದ್ಧವಾಗಿದ್ದ ಇಂಡಿಗೊ ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದ ವಿಚಾರಕ್ಕೆ ಸಂಬಂಧಪಟ್ಟಂತೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಪ್ರತಿಕ್ರಿಯೆ ನೀಡಿದ್ದು, ಬೈ ಮಿಸ್ಟೇಕ್( ಅರಿವಿಗೆ ಬಾರದೇ) ಆಗಿ ಅವರು ವಿಮಾನದ ಬಾಗಿಲು ತೆರೆದಿದ್ದಾರೆ ಅಷ್ಟೇ, ಅದಕ್ಕಾಗಿ ಅವರು ಕ್ಷಮೆಯನ್ನೂ ಯಾಚಿಸಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇಂಡಿಗೊ ವಿಮಾನದ ತುರ್ತು ನಿರ್ಗಮನ ದ್ವಾರವನನ್ನು ಪ್ರಯಾಣಿಕರೊಬ್ಬರು ಡಿ. 10 ರಂದು ತೆರೆಗೆದಿದ್ದರು ಎಂಬುದಾಗಿ ವರದಿಯಾಗಿತ್ತು. ಹೀಗೆ ಬಾಗಿಲು ತೆರೆದಿದ್ದು ಸಂಸದ ತೇಜಸ್ವಿ ಸೂರ್ಯ ಎಂದೂ ಹೇಳಲಾಗುತ್ತಿದೆ. ಈ ಸಂಬಂಧ ಬಂದ ವರದಿಗಳನ್ನು ಆಧರಿಸಿ ನಿನ್ನೆ ಭಾರೀ ಟೀಕೆಗಳು ಕೇಳಿ ಬಂದಿದ್ದವು. ಈ ಎಲ್ಲ ಟೀಕೆಗಳಿಗೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈಗ ಈ ಹೇಳಿಕೆ ನೀಡಿದ್ದಾರೆ.
ವಾಸ್ತವ ನೋಡುವುದು ಮುಖ್ಯ: 'ಟೀಕೆ ಮಾಡುವ ಮುನ್ನ ಸತ್ಯಗಳನ್ನು ಹಾಗೂ ವಾಸ್ತವಾಂಶಗಳನ್ನು ತಿಳಿಯುವುದು ಮುಖ್ಯ. ವಿಮಾನವು ಟೇಕ್ ಆಫ್ ಆಗುವ ಮುನ್ನ ಪ್ರಯಾಣಿಕ ಆಕಸ್ಮಿಕವಾಗಿ ಬಾಗಿಲು ತೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಡಿಗೂ ಏರ್ಲೈನ್ಸ್ ಸಿಬ್ಬಂದಿ ಎಲ್ಲ ತಪಾಸಣೆಯ ನಂತರ ವಿಮಾನ ಹಾರಾಟ ಮಾಡಿದ್ದಾರೆ ಅವರು ತಮ್ಮ ತಪ್ಪಿಗೆ ಕ್ಷಮೆಯನ್ನೂ ಕೇಳಿದ್ದಾರೆ' ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಏನಿದು ಪ್ರಕರಣ?: ಡಿಸೆಂಬರ್ 10 ರಂದು ಚೆನ್ನೈನಿಂದ ತಿರುಚಿರಾಪಳ್ಳಿಗೆ 6E 7339 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಆಕಸ್ಮಿಕವಾಗಿ ತುರ್ತು ನಿರ್ಗಮನವನ್ನು ತೆರೆದಿದ್ದರು. ಈ ಸಂಬಂಧ ಅವರು ಪ್ರಯಾಣಿಕ ಕ್ಷಮೆಯಾಚಿಸಿದ್ದರು ಎಂದು ವರದಿಯಾಗಿತ್ತು.
ಇಂಡಿಗೋ ಏರ್ಲೈನ್ಸ್ನಿಂದಲೂ ಹೇಳಿಕೆ: ಮತ್ತೊಂದೆಡೆ, ಪ್ರಯಾಣಿಕರೊಬ್ಬರು ಆಕಸ್ಮಾತ್ ಆಗಿ ವಿಮಾನದ ತುರ್ತು ಬಾಗಿಲನ್ನು ತೆರೆದಿದ್ದು, ಬಳಿಕ ಅವರು ಕ್ಷಮೆಕೋರಿದ್ದಾರೆ. ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ತಪಾಸಣೆಗಳನ್ನು ನಡೆಸಲಾಯಿತು. ಇದರಿಂದಾಗಿ ವಿಮಾನ ಹಾರಾಟದಲ್ಲಿ ವಿಳಂಬವಾಯಿತು ಎಂದು ಏರ್ಲೈನ್ಸ್ ತಿಳಿಸಿತ್ತು. ಆದರೆ ಡಿಜಿಸಿಎ ಹಾಗೂ ಇಂಡಿಗೋ ಬಾಗಿಲು ತೆರೆದ ಪ್ರಯಾಣಿಕರ ಯಾರು ಎಂಬುದನ್ನು ಇಂದಿನವರೆಗೂ ಬಹಿರಂಗ ಪಡಿಸಿಲ್ಲ.
ತಮಿಳುನಾಡು ಸಚಿವರ ಟ್ವೀಟ್ನಲ್ಲಿ ಏನಿದೆ? : ಮತ್ತೊಂದೆಡೆ ಈ ಘಟನೆ ಬಗ್ಗೆ ಡಿಸೆಂಬರ್ 29 ರಂದು ಟ್ವೀಟ್ ಮಾಡಿದ್ದ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ, ಪಕ್ಷವೊಂದರ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಪಕ್ಷದ ಯುವ ನಾಯಕ ಬೇಜವಾಬ್ದಾರಿಯಿಂದ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದಿದ್ದರು. ಆ ಬಳಿಕ ನಿಯಮಾನುಸಾರ ಪ್ರಯಾಣಿಕರನ್ನು ಇಳಿಸಿ ಪರಿಶೀಲನೆ ಮಾಡಲಾಯಿತು. ಈ ಘಟನೆಯಿಂದ ವಿಮಾನ 3 ಗಂಟೆ ತಡವಾಯಿತು. ಅಲ್ಲದೇ ಅವರು ಕ್ಷಮಾಪಣೆ ಕೋರಿದ್ದಾರೆ. ಈ ಸುದ್ದಿ ಏಕೆ ಮಾಧ್ಯಮಗಳಲ್ಲಿಲ್ಲ? ಎಂದು ತಮಿಳಿನಲ್ಲಿ ಅವರು ಟ್ವೀಟ್ ಮಾಡಿ ಪ್ರಶ್ನಿಸಿದ್ದರು.
ಕಾಂಗ್ರೆಸ್ ಟೀಕೆ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿ, ಬಿಜೆಪಿಯ ವಿಐಪಿ ಹುಡುಗನನ್ನು ಯಾವ ಧೈರ್ಯದಲ್ಲಿ ವಿಮಾನ ಸಂಸ್ಥೆ ದೂರುತ್ತಿದೆ?. ಬಿಜೆಪಿಯ ಪ್ರಬಲರಿಗೆ ಇದು ಹೊಸ ನಿಯಮವೇ? ಪ್ರಯಾಣಿಕರ ಸುರಕ್ಷತೆಯಲ್ಲಿ ರಾಜಿ ಮಾಡಿದ್ದಾರೆಯಾ? ಬಿಜೆಪಿಯ ಬಲಾಢ್ಯ ವಿಐಪಿಗಳ ಬಗ್ಗೆ ನೀವು ಪ್ರಶ್ನೆ ಮಾಡುವಂತಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ವಿಮಾನದ ತುರ್ತು ಬಾಗಿಲು ತೆರೆದ ಪ್ರಯಾಣಿಕ..ಹೇಳಿಕೆ ನೀಡಿದ ಡಿಜಿಸಿಎ