ನವದೆಹಲಿ: ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ವಿಕ್ರಾಂತ್ ಸಮುದ್ರದಲ್ಲಿ ಸಂಕೀರ್ಣ ಕುಶಲತೆಯ ಪರೀಕ್ಷೆಯನ್ನು ನಡೆಸಲು ಮತ್ತೊಂದು ಪರೀಕ್ಷೆಯನ್ನು ಪ್ರಾರಂಭಿಸಿದೆ. ಈ ಯುದ್ಧನೌಕೆಯನ್ನು ಸುಮಾರು ₹23,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರ ನಿರ್ಮಾಣವು ಅತ್ಯಾಧುನಿಕವಾಗಿದೆ.
ಈ ರೀತಿಯ ಸಾಮರ್ಥ್ಯವನ್ನು ಹೊಂದಿರುವ ಆಯ್ದ ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿದೆ. IAC ವಿಕ್ರಾಂತ್ 262 ಮೀಟರ್ ಉದ್ದ, 62 ಮೀಟರ್ ಅಗಲ ಮತ್ತು 59 ಮೀಟರ್ ಎತ್ತರವನ್ನು ಹೊಂದಿದೆ. ಇದರ ನಿರ್ಮಾಣವು 2009 ರಲ್ಲಿ ಪ್ರಾರಂಭವಾಯಿತು. ಈ ಯುದ್ಧನೌಕೆಯನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ನಿರ್ಮಿಸಿದೆ.
40,000 ಟನ್ ತೂಕದ ವಿಮಾನವಾಹಕ ನೌಕೆ ಭಾರತದಲ್ಲಿ ನಿರ್ಮಿಸಲಾದ ಅತಿದೊಡ್ಡ ಮತ್ತು ಅತ್ಯಂತ ಸಂಕೀರ್ಣವಾದ ಯುದ್ಧನೌಕೆಯಾಗಿದೆ. ಈ ಹಿಂದೆ ಆಗಸ್ಟ್‌ನಲ್ಲಿ ಐದು ದಿನಗಳ ಚೊಚ್ಚಲ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು ಮತ್ತು ಅಕ್ಟೋಬರ್‌ನಲ್ಲಿ 10 ದಿನಗಳ ಸಮುದ್ರ ಪ್ರಯೋಗವನ್ನೂ ನಡೆಸಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಇತ್ತೀಚೆಗೆ ಕೊಚ್ಚಿಯಲ್ಲಿ ಈ ಹಡಗನ್ನು ವೀಕ್ಷಣೆ ಮಾಡಿದ್ದರು.
ಇದನ್ನೂ ಓದಿ: ಹಿಮಪಾತದ ನಡುವೆ ಕಾಶ್ಮೀರದಲ್ಲಿ ಭದ್ರತಾ ಪಡೆ - ಉಗ್ರರ ನಡುವೆ ಗುಂಡಿನ ಚಕಮಕಿ
ಈ ಸಂದರ್ಭದಲ್ಲಿ ಮಾತನಾಡಿದ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಲ್, ವಿವಿಧ ಪರಿಸ್ಥಿತಿಗಳಲ್ಲಿ ಹಡಗು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಂಡುಹಿಡಿಯಲು ಐಎಸಿ ಈಗ ಸಂಕೀರ್ಣ ತಂತ್ರಗಳನ್ನು ನಡೆಸಲು ಮುಂದಾಗಿದೆ. ಈ ಪರೀಕ್ಷೆಯ ಸಮಯದಲ್ಲಿ ಹಡಗಿನ ವಿವಿಧ ಸಂವೇದಕ ಸೂಟ್‌ಗಳನ್ನು ಸಹ ಪರೀಕ್ಷಿಸಲಾಗುತ್ತದೆ ಎಂದಿದ್ದಾರೆ.
ನೌಕಾ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಯೋಗಾಲಯದ ಹಲವಾರು ವಿಜ್ಞಾನಿಗಳು, ವಿಶಾಖಪಟ್ಟಣಂನಲ್ಲಿರುವ ಡಿಆರ್ಡಿಒ ವಿಕ್ರಾಂತ್‌ನ ಮೂರನೇ ಹಂತದ ಸಮುದ್ರ ಪ್ರಯೋಗಗಳನ್ನು ನೋಡಿಕೊಳ್ಳುತ್ತಿದ್ದಾರೆ. ಯುದ್ಧನೌಕೆಯು MiG-29K ಫೈಟರ್ ಜೆಟ್‌ಗಳು, Kamov-31 ಹೆಲಿಕಾಪ್ಟರ್‌ಗಳು, MH-60R ಬಹು-ಪಾತ್ರ ಹೆಲಿಕಾಪ್ಟರ್‌ಗಳ ಕಾರ್ಯ ನಿರ್ವಹಣೆಗೆ ನೆಲೆಯಾಗಿದೆ.