ಸೋನಭದ್ರಾ(ಉತ್ತರ ಪ್ರದೇಶ): ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಶಕ್ತಿ ಹೆಚ್ಚುತ್ತಿದ್ದು, ಇದರಿಂದಾಗಿಯೇ ಭಾರತದ ನಾಗರಿಕರನ್ನು ಸುರಕ್ಷಿತವಾಗಿ ಕರೆತರಲು ಸಾಧ್ಯವಾಗುತ್ತಿದೆ. ನಾಗರಿಕರನ್ನು ವಾಪಸ್ ಕರೆತರುವ ಯಾವುದೇ ಪ್ರಯತ್ನವನ್ನು ಭಾರತ ಕೈಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಸೋನಭದ್ರಾ ಜಿಲ್ಲೆಯ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಆಪರೇಷನ್ ಗಂಗಾ ನಡೆಸುತ್ತಿದ್ದೇವೆ. ಈ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುತ್ತಿದೆ. ಇದಕ್ಕಾಗಿ ಭಾರತವು ತನ್ನ ನಾಲ್ವರು ಮಂತ್ರಿಗಳನ್ನು ಕಳುಹಿಸಲಾಗಿದೆ ಎಂದರು.
ಆತ್ಮನಿರ್ಭರ ಭಾರತ ಪರಿಕಲ್ಪನೆಯನ್ನು ವಿರೋಧ ಪಕ್ಷಗಳು ಅಪಹಾಸ್ಯ ಮಾಡುತ್ತಿದ್ದವು. ಮೇಕ್ ಇನ್ ಇಂಡಿಯಾದಿಂದ ಬಲಿಷ್ಟರಾಗಲು ಸಾಧ್ಯವಿಲ್ಲ ಎಂದು ಟೀಕಿಸುತ್ತಿದ್ದವು. ಆದೇ ಆತ್ಮ ನಿರ್ಭರ ಭಾರತದಿಂದಾಗಿ ನಾವು ಬಲಿಷ್ಟರಾಗುತ್ತಿದ್ದೇವೆ ಎಂದು ಮೋದಿ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ: ಭಾರತೀಯ ಧ್ವಜ ಹಿಡಿದು ಉಕ್ರೇನ್ನಿಂದ ಸುರಕ್ಷಿತವಾಗಿ ಹೊರಬಂದ ಪಾಕ್, ಟರ್ಕಿ ವಿದ್ಯಾರ್ಥಿಗಳು!
ಈಗಾಗಲೇ ಆಪರೇಷನ್ ಗಂಗಾ ಮೂಲಕ ಸಾವಿರಾರು ಮಂದಿಯನ್ನು ಭಾರತಕ್ಕೆ ಕರೆತರಲಾಗಿದೆ. ಇನ್ನೂ ಹಲವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಉಕ್ರೇನ್ನಿಂದ ಅಕ್ಕಪಕ್ಕದ ದೇಶಗಳಿಗೆ ನಾಗರಿಕರನ್ನು ಸ್ಥಳಾಂತರ ಮಾಡಿ, ಏರ್ಲಿಫ್ಟ್ ಮಾಡುವ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ.