ಶ್ರೀಹರಿಕೋಟಾ(ಆಂಧ್ರ ಪ್ರದೇಶ): ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಇಂದು ಹೊಸ ಇತಿಹಾಸ ನಿರ್ಮಿಸಿತು. ಖಾಸಗಿ ಕಂಪನಿ ನಿರ್ಮಿಸಿದ ಮೊದಲ ರಾಕೆಟ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಶ್ರೀಹರಿಕೋಟಾದಲ್ಲಿರುವ ಇಸ್ರೋ ಕೇಂದ್ರದಿಂದ ಇಂದು ಬೆಳಗ್ಗೆ 11.30ಕ್ಕೆ ಸೌಂಡಿಂಗ್ ರಾಕೆಟ್ ಲಾಂಚ್ ಪ್ಯಾಡ್‌ನಿಂದ ವಿಕ್ರಮ್-ಎಸ್ ರಾಕೆಟ್ ನಭಕ್ಕೆ ಹಾರಿತು. 89.5 ಕಿಮೀ ಎತ್ತರಕ್ಕೆ ಚಿಮ್ಮಿದ ಈ ರಾಕೆಟ್ ನಂತರ ಸುರಕ್ಷಿತವಾಗಿ ಬಂಗಾಳ ಕೊಲ್ಲಿಯಲ್ಲಿ ಬಿದ್ದಿದೆ. ಈ ಮೂಲಕ ಕೇವಲ 300 ಸೆಕೆಂಡುಗಳ ಉಡಾವಣೆ ಕಾರ್ಯಾಚರಣೆಯಲ್ಲಿ ದೇಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತು.
ಈ ರಾಕೆಟ್ಗೆ ವಿಕ್ರಮ್-ಎಸ್ ಎಂದು ಹೆಸರಿಡಲಾಗಿದೆ. 545 ಕೆಜಿ ತೂಕ ಮತ್ತು 6 ಮೀಟರ್ ಉದ್ದದ ರಾಕೆಟ್ ಸ್ಪೇಸ್ ಕಿಡ್ಜ್ ಇಂಡಿಯಾ, ಬಜೂಮ್ಕ್ ಅರ್ಮೇನಿಯಾ ಮತ್ತು ಎನ್-ಸ್ಪೇಸ್ ಟೆಕ್ ಇಂಡಿಯಾ ಎಂಬ ಮೂರು ಪೇಲೋಡ್‌ಗಳನ್ನು ಹೊತ್ತು ನಭಕ್ಕೆ ಚಿಮ್ಮಿತು.
ಶ್ರೀಹರಿಕೋಟಾದಲ್ಲಿ ಉಡಾವಣೆ ವೀಕ್ಷಿಸಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್, ಇದು ಹೊಸ ಆರಂಭ, ಹೊಸ ಉದಯ ಎಂದು ಬಣ್ಣಿಸಿದರು.
ಖಾಸಗಿ ಸಹಭಾಗಿತ್ವಕ್ಕಾಗಿ ಬಾಹ್ಯಾಕಾಶ ಕ್ಷೇತ್ರವನ್ನು ತೆರೆಯುವ ನಿರ್ಧಾರದ ಕೈಗೊಂಡ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಿದ ಸಚಿವ ಸಿಂಗ್, ಇದು ಭಾರತೀಯ ಸ್ಟಾರ್ಟ್ಅಪ್ ಕ್ಷೇತ್ರಕ್ಕೆ ಒಂದು ಮಹತ್ವದ ತಿರುವು ಎಂದೂ ಹೇಳಿದರು. ಅಲ್ಲದೇ, ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಇಸ್ರೋಗೆ ಅಭಿನಂದನೆ ಸಲ್ಲಿಸಿದರು.
ರಾಕೆಟ್ ಮಿಷನ್ ಯಶಸ್ವಿಯಾಗಿದೆ. ಎಲ್ಲ ವ್ಯವಸ್ಥೆಗಳು ಯೋಜಿಸಿದಂತೆ ಕಾರ್ಯ ನಿರ್ವಹಿಸಿವೆ ಎಂದು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದ (ಇನ್-ಸ್ಪೇಸ್) ಅಧ್ಯಕ್ಷ ಪವನ್ ಗೋಯೆಂಕಾ ಖಚಿತಪಡಿಸಿದ್ದಾರೆ.
ಸ್ಕೈರೂಟ್ ಏರೋಸ್ಪೇಸ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಪವನ್ ಕುಮಾರ್ ಚಂದನ ಅವರು, ಈ ಮಿಷನ್ ಅನ್ನು ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಪಿತಾಮಹ ದಿವಂಗತ ವಿಕ್ರಮ್ ಸಾರಾಭಾಯ್ ಅವರಿಗೆ ಅರ್ಪಿಸಿದ್ದಾರೆ. ಇನ್ನು, ವಿಕ್ರಮ್ ಸಾರಾಭಾಯ್ ಗೌರವಾರ್ಥವಾಗಿ ಈ ರಾಕೆಟ್ಗೆ ವಿಕ್ರಮ್-ಎಸ್ ಹೆಸರಿಸಲಾಗಿದೆ.
ಇದನ್ನೂ ಓದಿ: ಇತಿಹಾಸ ನಿರ್ಮಿಸಲು ಸಿದ್ಧವಾದ ಇಸ್ರೋ: ದೇಶದ ಮೊದಲ ಖಾಸಗಿ ರಾಕೆಟ್ ಇಂದು ಉಡಾವಣೆ