ನವದೆಹಲಿ: ಸರ್ಕಾರಿ ಸ್ವಾಮ್ಯದ ಜೀವ ವಿಮಾ ಸಂಸ್ಥೆ "ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ವಿಶ್ವದ ಅಗ್ರಗಣ್ಯ ವಿಮಾ ಕಂಪನಿಗಳ ಪಟ್ಟಿಯಲ್ಲಿ ನಾಲ್ಕನೇ ಅತಿದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ. ಎಸ್ ಆ್ಯಂಡ್ ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ಸಂಸ್ಥೆಯು ಎಲ್ಐಸಿಯ ಜೀವ ವಿಮೆ, ಅಪಘಾತ ವಿಮೆ ಮತ್ತು ಆರೋಗ್ಯ ಮೀಸಲುಗಳನ್ನು ಪರಿಗಣಿಸಿ ಈ ಶ್ರೇಯಾಂಕ ನೀಡಿದೆ.
ವಿಶ್ವದ ಹಲವು ಪ್ರತಿಷ್ಠಿತ ವಿಮಾ ಕಂಪನಿಗಳನ್ನು ಹಿಂದಿಕ್ಕಿ ಭಾರತೀಯರ ಅತ್ಯಂತ ವಿಶ್ವಾಸಾರ್ಹವಾದ ಸಂಸ್ಥೆಯಾದ ಎಲ್ಐಸಿ ಈ ಸಾಧನೆ ಮಾಡಿದೆ. ವಿಶ್ವದ ವಿವಿಧ ವಿಮಾ ಕಂಪನಿಗಳ 2022ರ ವಿಮಾ ಮೀಸಲಾತಿ, ಆರ್ಥಿಕ ಶಕ್ತಿಯನ್ನು ಪರಿಗಣಿಸಿ ಶ್ರೇಯಾಂಕಗಳನ್ನು ನೀಡಲಾಗಿದೆ. ಈ ವಿಮಾ ಮೀಸಲಾತಿಗಳು ಸಂಸ್ಥೆಗಳ ನಿಯಮಾನುಸಾರ ಭವಿಷ್ಯದ ಬದ್ಧತೆಗಳನ್ನು ವಿಮಾದಾರರಿಗೆ ಒದಗಿಸುವ ಹೊಣೆಗಾರಿಕೆಯನ್ನು ಪ್ರತಿನಿಧಿಸುತ್ತದೆ.
ಅಮೆರಿಕದ ಅತಿದೊಡ್ಡ ವಿಮಾ ಸಂಸ್ಥೆಯಾದ ಮೆಟ್ಲೈಫ್ ಸಂಸ್ಥೆಯನ್ನು ಹಿಂದಿಕ್ಕೆ ಭಾರತದ ಎಲ್ಐಸಿ 4ನೇ ಸ್ಥಾನ ಪಡೆದಿದೆ. ಮೆಟ್ಲೈಫ್ ವಿಶ್ವದ ವಿಮಾ ಕಂಪೆನಿಗಳ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ. ಇದರಿಂದ ಎಲ್ಐಸಿ ಮಹತ್ವ ನಮಗೆ ಅರ್ಥವಾಗುತ್ತದೆ. ಅಮೆರಿಕದ ಮತ್ತೊಂದು ವಿಮಾ ಸಂಸ್ಥೆ ಪ್ರುಡೆನ್ಸಿಯಲ್ ಫಿನಾನ್ಷಿಯಲ್ ಎಂಟನೇ ಸ್ಥಾನ ಪಡೆದಿದೆ.
ಎಸ್ ಆ್ಯಂಡ್ ಪಿ ಸಂಸ್ಥೆಯ ಜಾಗತಿಕ ಶ್ರೇಯಾಂಕದ ಪ್ರಕಾರ, ಅಲಿಯಾನ್ಸ್ ಎಸ್ಇ, ಚೈನಾ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ನಿಪ್ಪಾನ್ ಲೈಫ್ ಇನ್ಶುರೆನ್ಸ್ ಕಂಪೆನಿ ವಿಶ್ವದ ಬೃಹತ್ ವಿಮಾ ಸಂಸ್ಥೆಗಳ ಪಟ್ಟಿಯಲ್ಲಿ ಅಗ್ರಸ್ಥಾನಿಗಳಾಗಿವೆ. ವಿಶ್ವದ ಅಗ್ರಗಣ್ಯ 50 ವಿಮಾ ಸಂಸ್ಥೆಗಳ ಪಟ್ಟಿಯಲ್ಲಿ ಯೂರೋಪಿಯನ್ 6 ದೇಶಗಳು ಪ್ರಾಬಲ್ಯವನ್ನು ಸಾಧಿಸಿದ್ದು, 21 ವಿಮಾ ಸಂಸ್ಥೆಗಳು ಸ್ಥಾನ ಪಡೆದಿವೆ. ಯೂರೋಪಿನಲ್ಲಿನ ಹೆಚ್ಚಿನ ವಿಮಾ ಸಂಸ್ಥೆಗಳು ಯುಕೆಯಲ್ಲಿ ನೆಲೆಸಿದ್ದು, ಇವುಗಳಲ್ಲಿ 7 ಸಂಸ್ಥೆಗಳ ಪ್ರಧಾನ ಕಚೇರಿ ಇಲ್ಲಿದೆ. ಏಷ್ಯಾ ಖಂಡದ ದೇಶಗಳ ಪೈಕಿ ಸುಮಾರು 17 ವಿಮಾ ಸಂಸ್ಥೆಗಳು ಸ್ಥಾನಗಳನ್ನು ಪಡೆದಿದ್ದು, ಈ ಮೂಲಕ ಏಷ್ಯಾಖಂಡ ವಿಮಾ ಸಂಸ್ಥೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ.
ಏಷ್ಯಾದಲ್ಲಿ ಚೀನಾ ಮತ್ತು ಜಪಾನ್ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದು, ಒಟ್ಟು ಐದು ವಿಮಾ ಸಂಸ್ಥೆಗಳನ್ನು ಈ ಎರಡೂ ದೇಶಗಳು ಹೊಂದಿದೆ. ಉತ್ತರ ಅಮೆರಿಕಾ ವಿಮಾ ಸಂಸ್ಥೆಗಳ ಪಟ್ಟಿಯಲ್ಲಿ ಒಟ್ಟು 12 ವಿಮಾ ಸಂಸ್ಥೆಗಳನ್ನು ಹೊಂದಿದ್ದು, ಇವುಗಳಲ್ಲಿ 8 ಸಂಸ್ಥೆಗಳು ಅಮೆರಿಕದಲ್ಲಿ, ಕೆನಡಾ ಮತ್ತು ಬರ್ಮುಡಾದಲ್ಲಿ ತಲಾ ಎರಡು ಸಂಸ್ಥೆಗಳನ್ನು ಹೊಂದಿದೆ. ಅಮೆರಿಕವು 50 ವಿಮಾ ಸಂಸ್ಥೆಗಳ ಪಟ್ಟಿಯಲ್ಲಿ ಒಟ್ಟು 8 ವಿಮಾ ಸಂಸ್ಥೆಗಳನ್ನು ಹೊಂದಿ ಅಗ್ರಸ್ಥಾನಿಯಾಗಿದೆ.
ಇದನ್ನೂ ಓದಿ: ಎಲ್ಐಸಿಯಿಂದ ಹೊಸ ಪಾಲಿಸಿ: ಜೀವನ ಪೂರ್ತಿ ಆದಾಯ!