ನವದೆಹಲಿ : ಭಾರತದ ಪ್ರಾಥಮಿಕ ಶಾಲೆಗಳಲ್ಲಿ ವಿವಿಧ ಯೋಜನೆಗಳ ಮೂಲಕ ಉಚಿತ ಆಹಾರ ಪಡೆದ ತಾಯಂದಿರು ಮತ್ತು ಅವರ ಮಕ್ಕಳು ಅತ್ಯುತ್ತಮ ಬೆಳವಣಿಗೆ ಕಾಣುತ್ತಿದ್ದಾರೆ. ಇಂಥಹ ಯೋಜನೆಗಳು ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಅನುಕೂಲವಾಗಿದೆ ಎಂದು ಎಂದು ವರದಿಯೊಂದು ಹೇಳಿದೆ.
ಅಮೆರಿಕದ ಇಂಟರ್ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಪ್ರೋಗ್ರಾಂನ ಸಂಶೋಧಕರ ಪ್ರಕಾರ ಭಾರತದಲ್ಲಿ ಅಪೌಷ್ಟಿಕತೆಯಿಂದ ಕೂಡಿದ ಅತಿ ಹೆಚ್ಚು ಮಕ್ಕಳಿದ್ದು, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಯೋಜನೆ ಶಾಲೆಗಳಲ್ಲಿ ಮಕ್ಕಳಿಗೆ ಆಹಾರ ನೀಡುವ ವಿಶ್ವದ ಅತಿ ದೊಡ್ಡ ಯೋಜನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
1993ರಿಂದ 2016ರವರೆಗಿನ ಮಾಹಿತಿಯನ್ನು ಸಂಶೋಧಕರು ವಿಶ್ಲೇಷಿಸಿದ್ದು, ಮಧ್ಯಾಹ್ನದ ಬಿಸಿಯೂಟ ಯೋಜನೆ ಮಕ್ಕಳ ಬೆಳವಣಿಗೆಗೆ ಕಾರಣವಾಗುವುದಲ್ಲದೇ ಒಂದು ಪೀಳಿಗೆಯ ಸುಧಾರಣೆಗೆ ಬೆಂಬಲ ನೀಡುತ್ತದೆ ಎಂದು ವರದಿಯಲ್ಲಿ ಮಾಹಿತಿ ನೀಡಿದ್ದಾರೆ.
ಹಿಂದಿನ ದಶಕಗಳಲ್ಲಿ ಮಕ್ಕಳಿಗೆ ಶಾಲಾ ಆಹಾರ ನೀಡುವುದರಲ್ಲಿ ಮಾಡಲಾದ ಹೂಡಿಕೆಗಳು, ಭವಿಷ್ಯದಲ್ಲಿ ಮಕ್ಕಳ ಬೆಳವಣಿಗೆ ಮತ್ತು ಸುಧಾರಣೆಗೆ ಸಂಬಂಧಿಸಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಪ್ರಾಥಮಿಕ ಶಾಲೆಯಲ್ಲಿ ಈ ಯೋಜನೆಗಳನ್ನು ತರುವ ಮೂಲಕ, ಭವಿಷ್ಯದಲ್ಲಿ ಮಕ್ಕಳ ಕುಂಠಿತವನ್ನು ಕಡಿಮೆ ಮಾಡಬಹುದು ಎಂದು ನಮ್ಮ ಸಂಶೋಧನೆಗಳು ಸೂಚಿಸುತ್ತವೆ ಎಂದು ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯ ಮಾಡಿದ ಅಧ್ಯಯನದ ಲೇಖಕ ಸುಮನ್ ಚಕ್ರವರ್ತಿ ಹೇಳಿದ್ದಾರೆ.
ಮುಂದಿನ ಪೀಳಿಗೆಯಲ್ಲಿ ಅಪೌಷ್ಟಿಕತೆಯ ಅಪಾಯವನ್ನು ಕಡಿಮೆ ಮಾಡುವ ಮೂಲಕ ಶಾಲಾ ಊಟವು ಶಿಕ್ಷಣದ ಜೊತೆಗೆ ಮಹಿಳೆಯರಲ್ಲಿ ಫಲವತ್ತತೆ ಮತ್ತು ಆರೋಗ್ಯ ರಕ್ಷಣೆಗೆ ಸಹಕಾರಿಯಾಗಬಹುದು ಎಂದು ಸಂಶೋಧನೆಗಳು ತೋರಿಸುತ್ತಿವೆ.
ಇದನ್ನು ಓದಿ: ಫ್ರಾನ್ಸ್ ಅಧ್ಯಕ್ಷರ ಎಚ್ಚರಿಕೆಯ ಪರಿಣಾಮ: ಕೋವಿಡ್ ವ್ಯಾಕ್ಸಿನ್ಗೆ ಮುಗಿಬಿದ್ದ ಜನ
ಇನ್ನು, ಭಾರತದಲ್ಲಿ 1995ರಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು ಜಾರಿಗೊಳಿಸಲಾಯಿತು. ನಂತರ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ನ್ಯಾಷನಲ್ ಪ್ರೋಗ್ರಾಂ ಆಫ್ ನ್ಯೂಟ್ರೀಷನಲ್ ಸಪೋರ್ಟ್ ಫಾರ್ ಪ್ರೈಮರಿ ಎಜುಕೇಷನ್ ಅಡಿಯಲ್ಲಿ ಈ ಯೋಜನೆಯನ್ನು ವಿಸ್ತರಣೆಗೊಳಿಸಲಾಯಿತು.