ನವದೆಹಲಿ: ಕ್ಯಾನ್ಸರ್ ಇಂದಿಗೂ ಜನಸಾಮಾನ್ಯರನ್ನು ಅತಿಯಾಗಿ ಕಾಡುತ್ತಿರುವ ಮಾರಕ ಕಾಯಿಲೆ. ಮಹಿಳೆಯರನ್ನು ಸಾಮಾನ್ಯವಾಗಿ ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್‌ಗಳು ಕಾಡುತ್ತವೆ. ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ದೇಶದ ಮೊದಲ ಲಸಿಕೆ ನಾಳೆ ಹೊರಬರಲಿದೆ.
ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ (DBT) ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಅಭಿವೃದ್ಧಿಪಡಿಸಿದ ಕ್ವಾಡ್ರೈವೆಲೆಂಟ್ ಹ್ಯೂಮನ್ ಪ್ಯಾಪಿಲೋಮ ವೈರಸ್ ಲಸಿಕೆ (QHPV) ಪ್ರಾರಂಭಿಸಲು ಸಜ್ಜಾಗಿದೆ.
ಕೋವಿಡ್ ಕಾರ್ಯಪಡೆ ಅಧ್ಯಕ್ಷ ಡಾ.ಎನ್.ಕೆ.ಅರೋರಾ ಮಾತನಾಡಿ, "ಗರ್ಭಕಂಠದ ಕ್ಯಾನ್ಸರ್ಗೆ ಮೇಡ್ ಇನ್ ಇಂಡಿಯಾ ಲಸಿಕೆಯನ್ನು ಅಭಿವೃದ್ಧಿಸಿದ್ದು ಒಂದು ರೋಮಾಂಚಕ ಅನುಭವ" ಎಂದು ತಿಳಿಸಿದರು. "ನಮ್ಮ ಹೆಣ್ಣುಮಕ್ಕಳು ಮತ್ತು ಮೊಮ್ಮಕ್ಕಳು ಇನ್ನುಂದೆ ಈ ಬಹುನಿರೀಕ್ಷಿತ ಲಸಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲು ನಮಗೆ ಬಹಳ ಸಂತೋಷವಾಗಿದೆ.
ಇತ್ತೀಚೆಗೆ ಸಿದ್ಧಪಡಿಸಲಾಗಿರುವ ಪ್ರಮುಖ ಲಸಿಕೆಗಳಲ್ಲಿ ಇದೂ ಕೂಡ ಒಂದು. ಗರ್ಭಕಂಠದ ಕ್ಯಾನ್ಸರ್ ತಡೆಗೆ ಭಾರತೀಯ ಲಸಿಕೆಗಳು ಲಭ್ಯವಿರುತ್ತವೆ. 9-14 ವರ್ಷ ವಯಸ್ಸಿನ ಹುಡುಗಿಯರಿಗೂ ಲಭ್ಯವಾಗಲಿದೆ. ಇದನ್ನು 9-14 ವರ್ಷದ ಬಾಲಕಿಯರಿಗೆ ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮದಡಿ ನೀಡಲಾಗುವುದು" ಎಂದು ತಿಳಿಸಿದರು.
ಇದು ಅತ್ಯಂತ ಪರಿಣಾಮಕಾರಿ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಯುತ್ತದೆ. ಶೇಕಡಾ 85 ರಿಂದ 90 ರಷ್ಟು ಪ್ರಕರಣಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಒಂದು ಹ್ಯೂಮನ್ ಪ್ಯಾಪಿಲೋಮಾ ವೈರಸ್‌ನಿಂದ (ಹೆಚ್ಪಿವಿ) ಉಂಟಾಗುತ್ತದೆ. ಈ ಲಸಿಕೆ ಅಂಥ ವೈರಸ್‌ಗಳ ವಿರುದ್ಧವಾಗಿರುತ್ತದೆ. ಲಸಿಕೆಯನ್ನು ಹೆಣ್ಣು ಮಕ್ಕಳಿಗೆ ನೀಡಿದರೆ, ಅವರು ಸೋಂಕಿನಿಂದ ಮುಕ್ತರಾಗುತ್ತಾರೆ. ಬಹುಶಃ 30 ವರ್ಷಗಳ ನಂತರ ಮಹಿಳೆಯರಲ್ಲಿ ಕ್ಯಾನ್ಸರ್ ಅನ್ನೋದು ಸಂಭವಿಸುವುದಿಲ್ಲ ಎಂದು ಡಾ.ಅರೋರಾ ಮಾಹಿತಿ ನೀಡಿದರು.
ಇದನ್ನೂ ಓದಿ: ಆರೋಗ್ಯವಂತ ಮಹಿಳೆಯರಲ್ಲಿ ಹೆಚ್ಚುತ್ತಿದೆ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್
ಅಲ್ಲದೇ ಜಾಗತಿಕ ಮಾರುಕಟ್ಟೆಯಲ್ಲಿ ಈ ಲಸಿಕೆಯ ಕೊರತೆಯಿತ್ತು. ಈಗ ಭಾರತೀಯ ಲಸಿಕೆ ಸಿದ್ಧವಾಗಿದೆ. ಮೇಡ್-ಇನ್-ಇಂಡಿಯಾ ಲಸಿಕೆ ನಮ್ಮನ್ನು ರಕ್ಷಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.