ತಿರುವನಂತಪುರ(ಕೇರಳ) : ಇದೇ ಮೊದಲ ಬಾರಿಗೆ ದೇಶದಲ್ಲಿ ಅಧಿಕೃತವಾಗಿ ಸಲಿಂಗಿ ಜೋಡಿಯೊಂದು ವಿವಾಹ ಬಂಧನಕ್ಕೆ ಒಳಗಾಗಿದೆ. ಅದೂ ಕೂಡ ಪ್ರೇಮಿಗಳ ದಿನದಂದೇ ಎಂಬುದು ವಿಶೇಷ.
ಕೇರಳದ ತಿರುವನಂತಪುರದಲ್ಲಿ ತಮ್ಮ ಬಂಧುಗಳು, ಸ್ನೇಹಿತರ ಸಮ್ಮುಖದಲ್ಲಿ ಶ್ಯಾಮ್ ಎಸ್. ಪ್ರಭಾ ಮತ್ತು ಮನು ಕಾರ್ತಿಕ್ ಎಂಬ ಸಲಿಂಗಿಗಳು ಸಪ್ತಪದಿ ತುಳಿದಿದ್ದಾರೆ.
ಶ್ಯಾಮ್ ಮತ್ತು ಮನು ಕಳೆದ 10 ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ಶ್ಯಾಮ್ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾರೆ. ಈ ಇಬ್ಬರೂ 5 ವರ್ಷಗಳ ಹಿಂದೆಯೇ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಕಾನೂನಿನಲ್ಲಿ ಸಲಿಂಗಿಗಳ ಮದುವೆಗೆ ಮಾನ್ಯತೆ ಇಲ್ಲದ ಕಾರಣ, ವಿವಾಹ ವಿಳಂಬವಾಗಿತ್ತು. ಇಂದು ಪ್ರೇಮಿಗಳ ದಿನದ ಕಾರಣ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
ಅಲ್ಲದೇ, ತಮ್ಮ ವಿವಾಹವನ್ನು ಕಾನೂನುಬದ್ಧಗೊಳಿಸಬೇಕು ಎಂದು ಶ್ಯಾಮ್ ಮತ್ತು ಮನು ಕೇರಳ ಸರ್ಕಾರ, ನ್ಯಾಯಾಲಯಕ್ಕೆ ಅರಿಕೆ ಮಾಡಿದ್ದಾರೆ. ತಮ್ಮ ಈ ವಿವಾಹವು ದೇಶದಲ್ಲಿ ಸಲಿಂಗಿಗಳ ವಿವಾಹಕ್ಕೆ ಹೊಸ ಅಡಿಪಾಯವಾಗಲಿದೆ ಎಂದು ಹೇಳಿಕೊಂಡಿದ್ದಾರೆ.
ಮನು ಕಾರ್ತಿಕ್ ಅವರು ಟೆಕ್ನೋಪಾರ್ಕ್‌ನಲ್ಲಿ ಹಿರಿಯ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕರಾಗಿ(ಹೆಚ್ಆರ್) ಕೆಲಸ ಮಾಡುತ್ತಿದ್ದರೆ, ಶ್ಯಾಮ್ ಅವರು ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಟ್ರಾನ್ಸ್‌ಜೆಂಡರ್ ಕೇಂದ್ರದಲ್ಲಿ ಯೋಜನಾ ಸಂಯೋಜಕರಾಗಿದ್ದಾರೆ.